ಬೆಂಗಳೂರು: ಹೈಕೋರ್ಟ್ ಮಧ್ಯಂತರ ಆದೇಶದ ಪ್ರಕಾರ ಎನ್ಟಿಟಿಎಫ್ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ಫಲಿತಾಂಶ ನೀಡಿ, ಸೀಟು ಹಂಚಿಕೆಗೆ ಪರಿಗಣಿಸಬೇಕಿರುವ ಹಿನ್ನೆಲೆಯಲ್ಲಿ ಪಾಸ್ ಆದ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಹಾಜರಾಗಲು ತಿಳಿಸಲಾಗಿದೆ. ಜುಲೈ 13ರಂದು ಮಧ್ಯಾಹ್ನ 2 ಗಂಟೆಗೆ (ವರದಿ ಮಾಡಿಕೊಳ್ಳುವ ಸಮಯ: ಮಧ್ಯಾಹ್ನ 1.45 ಗಂಟೆ) ಅಥವಾ ಜುಲೈ 14ರಂದು ಬೆಳಗ್ಗೆ 11 ಗಂಟೆಗೆ ಎಲ್ಲ ಮೂಲ ದಾಖಲಾತಿಗಳು ಹಾಗೂ ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.
ದಾಖಲೆಗಳ ಪರಿಶೀಲನೆಯಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳಿಗೆ ಆಯ್ಕೆಗಳನ್ನು (ಆಪ್ಷನ್ಸ್) ದಾಖಲಿಸಲು ಅವಕಾಶ ನೀಡಿ, ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ವೃತ್ತಿನಿರತ ಅಭ್ಯರ್ಥಿಗಳಿಗೆ ಸೂಚನೆ:ಡಿಸಿಇಟಿ - 2024ಕ್ಕೆ ಅರ್ಜಿ ಸಲ್ಲಿಸಿರುವ ವೃತ್ತಿನಿರತ ಡಿಪ್ಲೊಮಾ ಅಭ್ಯರ್ಥಿಗಳು ನಿಗದಿತ ಒಂದು ವರ್ಷದ ಸೇವಾ ಪ್ರಮಾಣಪತ್ರ ಸಲ್ಲಿಸದೇ ಇರುವ ಕಾರಣಕ್ಕೆ ವೃತ್ತಿನಿರತ ಕೋಟಾದ ಎರಡನೇ ವರ್ಷದ/ಮೂರನೇ ಸೆಮಿಸ್ಟರ್ ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ಅರ್ಹತೆ ಪಡೆದಿರುವುದಿಲ್ಲ. ಅಂತಹ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗಿ ವೆರಿಫಿಕೇಶನ್ ಸ್ಲಿಪ್ ಪಡೆದು ರೆಗ್ಯುಲರ್ ಡಿಪ್ಲೊಮಾ (Regular Diploma) ಅಭ್ಯರ್ಥಿಗಳೆಂದು ಪರಿಗಣಿಸಲು ಕೋರಿರುತ್ತಾರೆ. ಅಂತಹ ಅಭ್ಯರ್ಥಿಗಳಿಗೆ ರೆಗ್ಯುಲರ್ ರ‍್ಯಾಂಕ್ ನೀಡಲಾಗುವುದು ಮತ್ತು ಆಯ್ಕೆಗಳನ್ನು (ಆಪ್ಷನ್ಸ್) ದಾಖಲಿಸಲು ಅವಕಾಶ ನೀಡಿ ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.