ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರಸಕ್ತ ಸಾಲಿನ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ- ಸೆಟ್) ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆ ನಿರ್ವಹಣೆ ಮಾಡುವ ಇಚ್ಛೆ ಹೊಂದಿರುವ ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗಬಹುದು. ಇಂದಿನಿಂದ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಜುಲೈನಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆ ಅನುಸಾರ ಜುಲೈ 22ರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿತ್ತು. ಆದರೆ, ತಾಂತ್ರಿಕ ದೋಷಕದಿಂದ ಅರ್ಜಿ ಸಲ್ಲಿಕೆ ಮುಂದೂಡಲಾಗಿತ್ತು. ಇದೀಗ ಪರಿಷ್ಕೃತ ಅರ್ಜಿ ಪ್ರಕಟಿಸಿರುವ ಕೆಇಎ ಇಂದಿನಿಂದ (ಜುಲೈ 29)ರಿಂದ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು ಮುಂದಾಗಬಹುದು ಎಂದು ತಿಳಿಸಿದೆ.
ವಿದ್ಯಾರ್ಹತೆ:ಅಧಿಕೃತ ವಿಶ್ವ ವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದಾಗಿದೆ. ಒಟ್ಟು 41 ವಿಷಯದಲ್ಲಿ ಅರ್ಹರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಗರಿಷ್ಠ ವಯೋಮಿತಿ ಇಲ್ಲ.
ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ನಿರ್ವಹಣೆಗೆ ಕೆ ಸೆಟ್ ಅರ್ಹತೆ ಪಡೆಯುವುದು ಅವಶ್ಯವಾಗಿದ್ದು, ಅಭ್ಯರ್ಥಿಗಳು ಪರೀಕ್ಷೆಗೆ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಯುಜಿಸಿ ನಿಯಮದ ಅಡಿಯಲ್ಲಿ ಈ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕಾತಿ ಸುಲಭವಾಗಲಿದೆ. ಇಲ್ಲಿಯವರೆಗೆ ಈ ಪರೀಕ್ಷೆಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ನಡೆಸಲಾಗುತ್ತಿತ್ತು. ಆದರೆ, ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುತ್ತಿದೆ.