ಸ್ಪರ್ಧಾತ್ಮಕ ಪರೀಕ್ಷೆಗಳ ಈ ಜಗತ್ತಿನಲ್ಲಿ ಉತ್ತಮ ಅಂಕಗಳನ್ನು ಪಡೆಯಲೇಬೇಕು. ಹೀಗಾಗಿ, ಅನೇಕ ಬಾರಿ ಪರೀಕ್ಷೆಗಳು ಸಾಕಷ್ಟು ಒತ್ತಡ ಹೇರುತ್ತವೆ. ಯಾವುದನ್ನು ಓದುವುದು, ಹೇಗೆ ಸಿದ್ಧತೆ ನಡೆಸಬೇಕು ಎಂಬೆಲ್ಲ ಹತ್ತು ಹಲವು ಪ್ರಶ್ನೆಗಳು ಕಾಡುತ್ತವೆ. ಅನೇಕ ಬಾರಿ ಸರಿಯಾದ ಯೋಜನೆಯೂ ಕೂಡ ಫಲ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಪರೀಕ್ಷೆಗೆ ತಯಾರಾಗುವ ಮುನ್ನ ಇಲ್ಲಿ ಕೊಟ್ಟಿರುವ ವಿಚಾರಗಳು ನಿಮಗೆ ತಿಳಿದಿರಲಿ.
ಸರಿಯಾದ ಓದಿನ ಯೋಜನೆ ರೂಪಿಸಿಕೊಳ್ಳಿ: ವ್ಯವಸ್ಥಿತ ಓದಿಗೆ ಉತ್ತಮ ಯೋಜನೆ ಅತ್ಯಗತ್ಯ. ಯಾವಾಗ, ಏನು, ಯಾವ ವಿಷಯಗಳನ್ನು ಓದಬೇಕು ಎಂಬ ಕುರಿತು ನಿರ್ದಿಷ್ಟವಾಗಿ ತಿಳಿದಿರಬೇಕು. ಇದಕ್ಕಾಗಿ ಪ್ರತಿ ಓದಿಗೆ ಸರಿಯಾದ ಯೋಜನೆ ಹಾಕಿಕೊಳ್ಳಿ.
ಓದಿಗೆ ಪೂರಕ ವಾತಾವರಣ: ಓದಿಗೆ ಪೂರಕ ಮತ್ತು ಆರಾಮದಾಯಕ ವಾತಾವರಣ ಏಕಾಗ್ರತೆ ಸಾಧಿಸಲು ಸಹಾಯ ಮಾಡುತ್ತದೆ. ಮನೆ ಅಥವಾ ಹಾಸ್ಟೆಲ್ ಯಾವುದೇ ಇರಲಿ ಅಲ್ಲಿ ತಾಜಾ ಗಾಳಿ, ಬೆಳಕು ಬರುವ ಸ್ಥಳವನ್ನು ಆಯ್ಕೆ ಮಾಡಬೇಕು. ಮೊಬೈಲ್ಗಳಿಂದ ದೂರವಿರಿ. ಚೇರ್ ಮೇಲೆ ಕುಳಿತು ಓದುವುದರಿಂದ ದೇಹದ ಮೇಲೆ ಹೆಚ್ಚಿನ ಬಳಲಿಕೆ ತಪ್ಪುತ್ತದೆ.
ವಿರಾಮ ತೆಗೆದುಕೊಳ್ಳಿ: ಓದುವಾಗ ವಿರಾಮ ತೆಗೆದುಕೊಳ್ಳುವುದು ಅಗತ್ಯ. ಇದರಿಂದ ಮಾತ್ರವೇ ನಿಮ್ಮ ಮಿದುಳು ಉತ್ತಮವಾಗಿ ಕೆಲಸ ಮಾಡುತ್ತದೆ. ವಿರಾಮವಿಲ್ಲದೇ ದೀರ್ಘಾವಧಿ ಓದುವುದರಿಂದ ಒತ್ತಡ ಹೆಚ್ಚುತ್ತದೆ. ಓದಿನ ಮಧ್ಯೆ ವಿರಾಮ ಪಡೆದು ನಡಿಗೆಯಂತಹ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಪ್ರಯೋಜನವಿದೆ.
ಆರೋಗ್ಯಯುತ ಆಹಾರ ಸೇವಿಸಿ: ಉತ್ತಮ ಆಹಾರ ಸೇವನೆ ಅಭ್ಯಾಸ ಆರೋಗ್ಯ ನಿರ್ವಹಣೆಗೆ ಸಹಾಯಕ. ಉತ್ತಮ ಪೋಷಕಾಂಶಯುಕ್ತ ಆಹಾರ ಆಲಸ್ಯ ಮತ್ತು ಅಕಾಲಿಕ ನಿದ್ದೆಯನ್ನು ತಪ್ಪಿಸುತ್ತದೆ. ದೇಹ ನಿರ್ಜಲೀಕರಣಕ್ಕೆ ಒಳಗಾಗದಂತೆ ಅಗತ್ಯ ಪ್ರಮಾಣದಲ್ಲಿ ನೀರು ಸೇವಿಸಿ.