ನವದೆಹಲಿ:2021-22 ನೇ ಸಾಲಿನಲ್ಲಿ ದೇಶದಲ್ಲಿರುವ ಉನ್ನತ ಶಿಕ್ಷಣ ಕಾಲೇಜುಗಳ ಸಮೀಕ್ಷೆ ನಡೆಸಲಾಗಿದ್ದು, ಟಾಪ್ 10 ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ 4,430 ಕಾಲೇಜುಗಳು ಇದ್ದು, ವಿದೇಶಗಳಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದೆ.
ಉನ್ನತ ಶಿಕ್ಷಣ ಸಂಸ್ಥೆಗಳ ಕುರಿತು ಆಲ್ ಇಂಡಿಯಾ ಸರ್ವೇ ಫಾರ್ ಹೈಯರ್ ಎಜುಕೇಶನ್ ನಡೆಸಿರುವ ಸಮೀಕ್ಷೆಯನ್ನು ಕೇಂದ್ರ ಉನ್ನತ ಶಿಕ್ಷಣ ಇಲಾಖೆಯು ಗುರುವಾರ ಬಿಡುಗಡೆ ಮಾಡಿದೆ. ಇದರಲ್ಲಿ ದೇಶದಲ್ಲಿಯೇ ಅತ್ಯಧಿಕ ಕಾಲೇಜುಗಳು ಉತ್ತರಪ್ರದೇಶದಲ್ಲಿವೆ (7182) ಎಂದು ಹೇಳಿದ್ದರೆ, ಮಹಾರಾಷ್ಟ್ರದಲ್ಲಿ 4,682 ಶಿಕ್ಷಣ ಸಂಸ್ಥೆಗಳಿದ್ದು ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನ, ತಮಿಳುನಾಡು, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ನಂತರದ ಟಾಪ್ 10 ರಲ್ಲಿವೆ.
ಜನ ಸಾಂದ್ರತೆ ಲೆಕ್ಕಾಚಾರ:18 ರಿಂದ 23 ವರ್ಷದ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ದೇಶದಲ್ಲಿಯೇ ಸರಾಸರಿ 30 ಕಾಲೇಜುಗಳಿವೆ. ಇದೇ ಲೆಕ್ಕಾಚಾರದಲ್ಲಿ ಕರ್ನಾಟಕದಲ್ಲಿ 66 ಕಾಲೇಜುಗಳಿದ್ದರೆ, ತೆಲಂಗಾಣ (52), ಆಂಧ್ರ ಪ್ರದೇಶ (49), ಹಿಮಾಚಲ ಪ್ರದೇಶ (47), ಪುದುಚೇರಿ (53) ಮತ್ತು ಕೇರಳದಲ್ಲಿ (46) ಕಾಲೇಜುಗಳಿವೆ ಎಂದು ಹೇಳಿದೆ.
ಅತಿ ಹೆಚ್ಚು ಶಿಕ್ಷಕರಿರುವ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಶೇಕಡಾ 9.4 ರಷ್ಟು ಅಂದರೆ 1.50 ಲಕ್ಷ ಶಿಕ್ಷಕರಿದ್ದಾರೆ. ಒಟ್ಟಾರೆ ಶಿಕ್ಷಕರಲ್ಲಿ ಒಬಿಸಿ 56,427, ಎಸ್ಸಿ 13092, ಎಸ್ಟಿ 3415 ಬೋಧಕರಿದ್ದರೆ, ಶೇಕಡಾ 10.4 ರಷ್ಟು ಮುಸ್ಲಿಂ ಶಿಕ್ಷಕರಿದ್ದಾರೆ ಎಂದು ಸಮೀಕ್ಷೆ ಗುರುತಿಸಿದೆ.