ನವದೆಹಲಿ:ಭಾರತದ ಪ್ರಮುಖ ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ ವಜೀರ್ ಎಕ್ಸ್ ಅನ್ನು ಗುರುವಾರ ಹ್ಯಾಕ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಇದರ ಪರಿಣಾಮವಾಗಿ ಸುಮಾರು 234 ಮಿಲಿಯನ್ ಡಾಲರ್ ಮೌಲ್ಯದ ಡಿಜಿಟಲ್ ಸ್ವತ್ತುಗಳನ್ನು ಬೇರೆ ವಿಳಾಸಕ್ಕೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.
ತನ್ನ ಪ್ಲಾಟ್ಫಾರ್ಮ್ ಹ್ಯಾಕ್ ಆಗಿರುವುದನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಖಚಿತಪಡಿಸಿರುವ ವಜೀರ್ ಎಕ್ಸ್, ಗ್ರಾಹಕರು ತಮ್ಮ ಖಾತೆಯಿಂದ ನಗದು ಹಿಂಪಡೆಯುವಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ. "ನಮ್ಮ ಮಲ್ಟಿ- ಸಿಗ್ ವ್ಯಾಲೆಟ್ಗಳ ಪೈಕಿ ಒಂದು ಹ್ಯಾಕ್ ಆಗಿದೆ ಎಂದು ನಮಗೆ ತಿಳಿದಿದೆ. ನಮ್ಮ ತಂಡವು ಘಟನೆಯ ಬಗ್ಗೆ ಸಕ್ರಿಯವಾಗಿ ತನಿಖೆ ನಡೆಸುತ್ತಿದೆ. ನಿಮ್ಮ ಸ್ವತ್ತುಗಳ ಸುರಕ್ಷತೆಗಾಗಿ ಭಾರತೀಯ ರೂಪಾಯಿ ಮತ್ತು ಕ್ರಿಪ್ಟೋ ಹಿಂಪಡೆಯುವಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು" ಎಂದು ಕಂಪನಿ ತಿಳಿಸಿದೆ.
"ನಮ್ಮ ಮಲ್ಟಿ ಸಿಗ್ ವ್ಯಾಲೆಟ್ಗಳ ಪೈಕಿ ಒಂದರ ಮೇಲೆ ಸೈಬರ್ ದಾಳಿ ನಡೆದಿದೆ. ದಾಳಿಯಲ್ಲಿ 230 ಮಿಲಿಯನ್ ಡಾಲರ್ಗಿಂತ ಹೆಚ್ಚು ನಿಧಿಯ ನಷ್ಟ ಉಂಟಾಗಿದೆ" ಎಂದು ಕಂಪನಿ ಹೇಳಿದೆ. ಫೆಬ್ರವರಿ 2023 ರಿಂದ ಲಿಮಿನಾಲ್ನ ಡಿಜಿಟಲ್ ಅಸೆಟ್ ಕಸ್ಟಡಿ ಮತ್ತು ವ್ಯಾಲೆಟ್ ಮೂಲಸೌಕರ್ಯದ ಸೇವೆಗಳನ್ನು ಬಳಸಿಕೊಂಡು ಈ ವ್ಯಾಲೆಟ್ ಅನ್ನು ನಿರ್ವಹಿಸಲಾಗುತ್ತಿದೆ. ವಜೀರ್ ಎಕ್ಸ್ ಪ್ರಕಾರ, ಸೈಬರ್ ದಾಳಿಯು ಲಿಮಿನಾಲ್ನ ಇಂಟರ್ ಫೇಸ್ನಲ್ಲಿ ಪ್ರದರ್ಶಿಸಲಾದ ಡೇಟಾ ಮತ್ತು ವಹಿವಾಟಿನ ನಿಜವಾದ ವಿಷಯಗಳ ನಡುವಿನ ವ್ಯತ್ಯಾಸದಿಂದ ಹುಟ್ಟಿಕೊಂಡಿದೆ.