ಹೈದರಾಬಾದ್:ಭಾರತದ ಡಿಜಿಟಲ್ ಮತ್ತು ಕಡಿಮೆ ಭೌತಿಕ ಹಣದ ವಹಿವಾಟು ಗುರಿ ತಲುಪಲು ದೇಶದ ಜನರು ಮುಂದಾಗುತ್ತಿದ್ದಾರೆ. ತಮ್ಮ ದೈನಂದಿನ ಅವಶ್ಯಕ ವಸ್ತುಗಳ ಕೊಳ್ಳುವಿಕೆಗೆ ಭೌತಿಕ ಹಣದ ಬದಲಾಗಿ ಯುಪಿಐ ಮೂಲಕ ಡಿಜಿಟಲ್ ವಹಿವಾಟು ನಡೆಸುತ್ತಿದ್ದಾರೆ. ಇದರ ಪರಿಣಾಮವಾಗಿ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ಆಧಾರಿತ ವಹಿವಾಟು ಜೂನ್ನಲ್ಲಿ 13.89 ಬಿಲಿಯನ್ ತಲುಪಿದೆ.
ವರ್ಷದಿಂದ ವರ್ಷಕ್ಕೆ ಲೆಕ್ಕ ಹಾಕಿದಾಗ ಜೂನ್ನಲ್ಲಿ ಯುಪಿಐ ವಹಿವಾಟಿನ ಬಳಕೆ ಬೆಳವಣಿಗೆ ಶೇ 49ರಷ್ಟು ಏರಿಕೆ ಕಂಡಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ಕಾರ್ಪೊರೇಷನ್ ದತ್ತಾಂಶದಲ್ಲಿ ತಿಳಿಸಿದೆ. 2024ರ ಜೂನ್ನಲ್ಲಿ ಯುಪಿಐ ವಹಿವಾಟು 20.07 ಲಕ್ಷ ಕೋಟಿ ಮೌಲ್ಯ ತಲುಪಿದೆ. ಮೇ ತಿಂಗಳಿಗೆ ಹೋಲಿಕೆ ಮಾಡಿದರೆ, 1.9ರಷ್ಟು ಕಡಿಮೆ ಇದೆ. ಮೇಯಲ್ಲಿ ಯುಪಿಐ ವಹಿವಾಟು 20.45 ಲಕ್ಷ ಕೋಟಿ ಆಗಿತ್ತು.
ಇನ್ನು ವರ್ಷದಿಂದ ವರ್ಷದ ಆಧಾರದ ಮೇಲೆ ಗಮನಿಸಿದಾಗ ಜೂನ್ನಲ್ಲಿ ಉತ್ತಮ ವಹಿವಾಟು ಆಗಿದೆ. ಕಳೆದ ವರ್ಷದ ಜೂನ್ಗಿಂತ ಈ ವರ್ಷದ ಜೂನ್ನಲ್ಲಿ ಮೌಲ್ಯ ಶೇ. 36ರಷ್ಟು ಏರಿಕೆ ಕಂಡಿದೆ. ಇನ್ನು ದೈನಂದಿನ ವಹಿವಾಟಿನ ಲೆಕ್ಕ ಹಾಕಿದರೆ, ಜೂನ್ನಲ್ಲಿ ದಿನಕ್ಕೆ 66,903 ಕೋಟಿ ದೈನಂದಿನ ವಹಿವಾಟು ನಡೆದಿದ್ದು, ಸಾಮಾನ್ಯ ವಹಿವಾಟು 463 ಮಿಲಿಯನ್ ಆಗಿದೆ.
2016ರಲ್ಲಿ ಯುಪಿಐ ಚಾಲನೆಗೆ ಬಂದಾಗಿನಿಂದ ದಾಖಲೆ ಮಟ್ಟದ ವಹಿವಾಟು ಕಳೆದ ಮೇ ತಿಂಗಳಲ್ಲಿ ನಡೆದಿತ್ತು.