ಮುಂಬೈ: ಕೇಂದ್ರ ಬಜೆಟ್ನ ಆರ್ಥಿಕ ಪರಿಣಾಮಗಳ ಬಗ್ಗೆ ಹೂಡಿಕೆದಾರರು ಇನ್ನೂ ಪರಿಶೀಲನೆ ಮಾಡುತ್ತಿರುವ ಮಧ್ಯೆ, ಬಜೆಟ್ ನಂತರದ ದಿನ ಬುಧವಾರದಂದು ಭಾರತದ ಷೇರು ಮಾರುಕಟ್ಟೆಗಳು ಇಳಿಕೆಯಲ್ಲಿ ಕೊನೆಗೊಂಡಿವೆ. ದಿನದ ವಹಿವಾಟಿನಲ್ಲಿ ಒಂದು ಹಂತದಲ್ಲಿ 79,750 ಕ್ಕೆ ಇಳಿದ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 280 ಪಾಯಿಂಟ್ಗಳು ಅಥವಾ ಶೇಕಡಾ 0.35 ರಷ್ಟು ಕುಸಿದು 80,149 ರಲ್ಲಿ ಕೊನೆಗೊಂಡಿತು. ಏತನ್ಮಧ್ಯೆ, ನಿಫ್ಟಿ 50.66 ಪಾಯಿಂಟ್ ಅಥವಾ ಶೇಕಡಾ 0.27 ರಷ್ಟು ಕುಸಿದು 24,414 ರಲ್ಲಿ ಕೊನೆಗೊಂಡಿದೆ.
ಸೆನ್ಸೆಕ್ಸ್ನಲ್ಲಿ ಬಜಾಜ್ ಫಿನ್ ಸರ್ವ್ನ ಮೊದಲ ತ್ರೈಮಾಸಿಕದ ಗಳಿಕೆಯು ಹೂಡಿಕೆದಾರರನ್ನು ಆಕರ್ಷಿಸಲು ವಿಫಲವಾದ ನಂತರ ಶೇಕಡಾ 2 ರಷ್ಟು ಕುಸಿದಿದೆ. ಬಜಾಜ್ ಫೈನಾನ್ಸ್, ಹಿಂದೂಸ್ತಾನ್ ಯೂನಿಲಿವರ್, ಕೊಟಕ್ ಮಹೀಂದ್ರಾ ಬ್ಯಾಂಕ್, ಅದಾನಿ ಪೋರ್ಟ್ಸ್, ಆಕ್ಸಿಸ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಷ್ಟ ಅನುಭವಿಸಿದ ಇತರ ದೊಡ್ಡ ಷೇರುಗಳಾಗಿವೆ. ಟೆಕ್ ಮಹೀಂದ್ರಾ, ಐಟಿಸಿ, ಎನ್ಟಿಪಿಸಿ, ಟಾಟಾ ಮೋಟಾರ್ಸ್ ಮತ್ತು ಸನ್ ಫಾರ್ಮಾ ಲಾಭ ಗಳಿಸಿದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಮಂಗಳವಾರ 2,975.31 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ - ಅಂಶಗಳು ತಿಳಿಸಿವೆ. ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಕಾಂಗ್ ಇಳಿಕೆಯಾದವು. ಯುರೋಪಿಯನ್ ಮಾರುಕಟ್ಟೆಗಳು ಕೂಡ ಇಳಿಕೆಯಲ್ಲಿ ವಹಿವಾಟು ನಡೆಸುತ್ತಿವೆ.