ಕರ್ನಾಟಕ

karnataka

ETV Bharat / business

ಆರೋಗ್ಯ ವಿಮಾ ಕ್ಷೇತ್ರಕ್ಕೆ ಎಲ್​ಐಸಿ ಎಂಟ್ರಿ ಶೀಘ್ರ: ಗ್ಲೋಬಲ್ ಡಾಟಾ ವರದಿ - LIC HEALTH INSURANCE

ಭಾರತೀಯ ಜೀವ ವಿಮಾ ನಿಗಮವು ಶೀಘ್ರದಲ್ಲೇ ಆರೋಗ್ಯ ವಿಮಾ ಕ್ಷೇತ್ರಕ್ಕೆ ಬರಲಿದೆ ಎಂದು ವರದಿ ಹೇಳಿದೆ.

ಆರೋಗ್ಯ ವಿಮಾ ಕ್ಷೇತ್ರಕ್ಕೆ ಎಲ್​ಐಸಿ ಎಂಟ್ರಿ ಶೀಘ್ರ: ಗ್ಲೋಬಲ್ ಡಾಟಾ ವರದಿ
ಆರೋಗ್ಯ ವಿಮಾ ಕ್ಷೇತ್ರಕ್ಕೆ ಎಲ್​ಐಸಿ ಎಂಟ್ರಿ ಶೀಘ್ರ: ಗ್ಲೋಬಲ್ ಡಾಟಾ ವರದಿ (IANS)

By ETV Bharat Karnataka Team

Published : Nov 15, 2024, 6:11 PM IST

ನವದೆಹಲಿ: ದೇಶದ ಸ್ವತಂತ್ರ ಆರೋಗ್ಯ ವಿಮಾ ಕಂಪನಿಯೊಂದರಲ್ಲಿ ಪಾಲುದಾರಿಕೆ ಹೊಂದುವ ಮೂಲಕ 2025ರಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ವು ಆರೋಗ್ಯ ವಿಮಾ ಕ್ಷೇತ್ರಕ್ಕೆ ಕಾಲಿಡುವ ನಿರೀಕ್ಷೆಯಿದೆ ಎಂದು ವರದಿಯೊಂದು ತಿಳಿಸಿದೆ. ಇದರಿಂದ ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಎಲ್​ಐಸಿಯ ಮಾರುಕಟ್ಟೆ ಪಾಲು ಮತ್ತಷ್ಟು ವಿಸ್ತರಿಸಲಿದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ ವಿಮಾ ಉದ್ಯಮ ಬೆಳವಣಿಗೆ:ಗ್ಲೋಬಲ್ ಡಾಟಾ ವರದಿಯ ಪ್ರಕಾರ, ಭಾರತದ ಆರೋಗ್ಯ ವಿಮಾ ಉದ್ಯಮವು 2024 ರಲ್ಲಿ ಇರುವ 1.3 ಲಕ್ಷ ಕೋಟಿ ರೂ.ಗಳಿಂದ 2028 ರ ವೇಳೆಗೆ 2.1 ಲಕ್ಷ ಕೋಟಿ ರೂ.ಗೆ ಅಂದರೆ ಶೇಕಡಾ 12.5 ರಷ್ಟು ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರದಲ್ಲಿ (ಸಿಎಜಿಆರ್) ಬೆಳೆಯುವ ನಿರೀಕ್ಷೆಯಿದೆ. ಈ ಸಕಾರಾತ್ಮಕ ಪ್ರವೃತ್ತಿಯ ನಿರೀಕ್ಷೆಯ ಮಧ್ಯೆ, ಈಗಾಗಲೇ ಬೃಹತ್ ಪ್ರಮಾಣದ ಗ್ರಾಹಕರನ್ನು ಹೊಂದಿರುವ ಎಲ್​ಐಸಿ ಆರೋಗ್ಯ ವಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಅದರ ಮಾರುಕಟ್ಟೆ ಪಾಲು ಗಮನಾರ್ಹವಾಗಿ ಹೆಚ್ಚಲಿದೆ ಎಂದು ಪ್ರಮುಖ ಡೇಟಾ ಮತ್ತು ವಿಶ್ಲೇಷಣಾ ಕಂಪನಿ ಗ್ಲೋಬಲ್ ಡಾಟಾ ಹೇಳಿದೆ.

ಖಾಸಗಿ ಸ್ವತಂತ್ರ ಆರೋಗ್ಯ ವಿಮಾ ಸಂಸ್ಥೆಯೊಂದರ ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಎಲ್ಐಸಿ ರಾಷ್ಟ್ರದ ಬೆಳೆಯುತ್ತಿರುವ ಆರೋಗ್ಯ ವಿಮಾ ಉದ್ಯಮದಲ್ಲಿ ಬಲವಾದ ಹೆಜ್ಜೆಯೂರಲು ಪ್ರಯತ್ನಿಸುತ್ತಿದೆ ಎಂದು ಗ್ಲೋಬಲ್ ಡಾಟಾದ ವಿಮಾ ವಿಶ್ಲೇಷಕ ಮನೋಗ್ನಾ ವಂಗಾರಿ ಹೇಳಿದ್ದಾರೆ. ಈ ಕಾರ್ಯತಂತ್ರವು ಬಹುಪಾಲು ಮಾಲೀಕತ್ವದಲ್ಲಿ ಅಂತರ್ಗತವಾಗಿರುವ ಅಪಾಯದ ಮಟ್ಟ ಕಡಿಮೆ ಪ್ರಮಾಣದಲ್ಲಿಟ್ಟು, ಕಾರ್ಯತಂತ್ರದ ಭಾಗವಹಿಸುವಿಕೆಯನ್ನು ಉಳಿಸಿಕೊಳ್ಳುವ ಎಲ್ಐಸಿಯ ಉದ್ದೇಶಕ್ಕೆ ಅನುಗುಣವಾಗಿದೆ ಎಂದು ವಂಗಾರಿ ಹೇಳಿದರು.

ಸ್ವತಂತ್ರ ಕಂಪನಿಯೊಂದರಲ್ಲಿ ಪಾಲು ಖರೀದಿಸಲು ನಿರ್ಧಾರ:ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವ ಎಲ್​ಐಸಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸ್ವತಂತ್ರ ಆರೋಗ್ಯ ವಿಮಾ ಕಂಪನಿಯೊಂದರಲ್ಲಿ ಪಾಲನ್ನು ಖರೀದಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಮತ್ತು ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕಳೆದ ವಾರ ಎಲ್ಐಸಿ ಎಂಡಿ ಮತ್ತು ಸಿಇಒ ಸಿದ್ಧಾರ್ಥ ಮೊಹಾಂತಿ ಹೇಳಿರುವುದು ಗಮನಾರ್ಹ.

2047 ರ ವೇಳೆಗೆ ವಿಮಾ ವ್ಯಾಪ್ತಿಯನ್ನು ಸಾರ್ವತ್ರಿಕವಾಗಿ ವಿಸ್ತರಿಸುವ ಗುರಿಯೊಂದಿಗೆ ಸರ್ಕಾರ ಮತ್ತು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ಇವೆರಡೂ ಆರೋಗ್ಯ ವಿಮೆಯ ವ್ಯಾಪ್ತಿಯನ್ನು ವಿಸ್ತರಿಸಲು ಉತ್ಸುಕವಾಗಿದೆ. ಆರೋಗ್ಯ ವಿಮಾ ಕ್ಷೇತ್ರಕ್ಕೆ ಎಲ್ಐಸಿಯ ಪ್ರವೇಶವು ಈ ಉಪಕ್ರಮಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುವ ನಿರೀಕ್ಷೆಯಿದೆ. ನಿಗಮವು ಬಲವಾದ ಬ್ರಾಂಡ್ ಆಗಿದ್ದು, 1.3 ಮಿಲಿಯನ್ ಏಜೆಂಟರನ್ನು ಹೊಂದಿದೆ ಎಂದು ವರದಿ ತಿಳಿಸಿದೆ. ಪ್ರಸ್ತುತ, ಭಾರತೀಯ ಆರೋಗ್ಯ ವಿಮಾ ಮಾರುಕಟ್ಟೆಯಲ್ಲಿ ಏಳು ಸ್ವತಂತ್ರ ಆರೋಗ್ಯ ವಿಮಾ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

ಇದನ್ನೂ ಓದಿ : ಕೇವಲ ₹11ಕ್ಕೆ 10 GB ಹೈಸ್ಪೀಡ್​ ಡೇಟಾ! ಅತೀ ಕಡಿಮೆ ವೆಚ್ಚದ ರಿಚಾರ್ಚ್‌ ಪ್ಲಾನ್ ತಂದ ಜಿಯೋ

ABOUT THE AUTHOR

...view details