ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿಯ ಚಿನಿವಾರ ಮಾರುಕಟ್ಟೆಗಳಲ್ಲಿ ಬುಧವಾರ ಚಿನ್ನದ ಬೆಲೆ 900 ರೂಪಾಯಿ ಏರಿಕೆಯಾಗಿದ್ದು, 10 ಗ್ರಾಂಗೆ ದಾಖಲೆಯ 77,850 ರೂಪಾಯಿ ತಲುಪಿತು. ಇದು ಇತ್ತೀಚಿನ ದಿನಗಳಲ್ಲಿ ಕಂಡುಬಂದ ಅತಿ ಹೆಚ್ಚಿನ ಬೆಲೆ ಏರಿಕೆ. ಜಾಗತಿಕ ಮಾರುಕಟ್ಟೆಗಳಲ್ಲಿ ಹಳದಿ ಲೋಹದ ಬೆಲೆ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ತಿಳಿಸಿದೆ.
ಶೇ 99.9ರಷ್ಟು ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 76,950 ರೂಪಾಯಿಗೆ ಮಾರಾಟವಾಗುತ್ತಿತ್ತು. ಅದೇ ರೀತಿ, ಶೇ 99.5 ಶುದ್ಧತೆಯ ಚಿನ್ನದ ಬೆಲೆ 900 ರೂಪಾಯಿ ಏರಿಕೆಯಾಗಿದ್ದು, 10 ಗ್ರಾಂಗೆ 77,500 ಮಾರಾಟವಾಯಿತು.
ಬೆಳ್ಳಿ ಬೆಲೆ 3 ಸಾವಿರ ರೂಪಾಯಿ ಹೆಚ್ಚಾಗಿದ್ದು, ಕೆ.ಜಿಗೆ 93 ಸಾವಿರ ರೂಪಾಯಿಗೆ ಮಾರಾಟವಾಗುತ್ತಿತ್ತು. ಕೈಗಾರಿಕೆಗಳು ಹಾಗು ನಾಣ್ಯ ತಯಾರಕರಿಂದ ಬೇಡಿಕೆ ಹೆಚ್ಚಾಗಿದ್ದು ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗಿದೆ. ಬುಧವಾರ ದಿನದ ಅಂತ್ಯಕ್ಕೆ 1 ಕೆ.ಜಿ ಬೆಳ್ಳಿ 90 ಸಾವಿರ ರೂಪಾಯಿಗೆ ತನ್ನ ಓಟ ನಿಲ್ಲಿಸಿತು.
ವ್ಯಾಪಾರಿಗಳು ಹೇಳುವ ಪ್ರಕಾರ, ಜುವೆಲ್ಲರಿಗಳು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾಗಿರುವುದು ಚಿನ್ನದ ಬೆಲೆ ದಾಖಲೆ ಮಟ್ಟ ತಲುಪಲು ಕಾರಣವಾದ ಅಂಶ. ಇದನ್ನು ಹೊರತುಪಡಿಸಿ, ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಇತ್ತೀಚಿಗೆ ಸಾಲದ ಮೇಲಿನ ಬಡ್ಡಿ ದರ ಇಳಿಸಿರುವುದು, ಚೀನಾ ಸರ್ಕಾರ ಕೈಗೊಂಡ ಆರ್ಥಿಕ ಪುನಶ್ಚೇತನ ಕ್ರಮಗಳು ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು, ರಷ್ಯಾ- ಉಕ್ರೇನ್ ಯುದ್ಧ ಚಿನ್ನ ಹಾಗು ಬೆಳ್ಳಿಯ ಬೆಲೆ ಏರಿಕೆಗೆ ಕಾರಣವಾದ ಇತರೆ ಮಹತ್ವದ ಅಂಶಗಳು.
ಇದನ್ನೂ ಓದಿ:AI ಸ್ಪ್ಯಾಮ್ ಡಿಟೆಕ್ಷನ್ ಪ್ರಾರಂಭ: ಅನುಮಾನಾಸ್ಪದ ಕರೆ, ಸಂದೇಶಗಳ ಬಗ್ಗೆ ಎಚ್ಚರಿಕೆ ನೀಡಲಿದೆ Airtel - Airtel AI Powered Spam Detection