ಆದಾಯ ತೆರಿಗೆ ಇಲಾಖೆಯು (ಐಟಿ) ನಮ್ಮ ಕ್ರೆಡಿಟ್ ಕಾರ್ಡ್ ವಹಿವಾಟುಗಳಿಂದ ಹಿಡಿದು, ನಮ್ಮ ವ್ಯಾಪಾರ ವಹಿವಾಟು ಮತ್ತು ನಗದು ಠೇವಣಿ ಸೇರಿ ಹಲವು ಮಾಹಿತಿ ಸಂಗ್ರಹಣ ಮಾಡುವುದರ ಜೊತೆಗೆ ಹದ್ದಿನ ಕಣ್ಣು ಇಟ್ಟಿರುತ್ತದೆ. ಆದಾಯಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳು ಕಂಡು ಬಂದರೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುವುದು ಗ್ಯಾರಂಟಿ! ಆದ್ದರಿಂದ ಕ್ರೆಡಿಟ್ ಕಾರ್ಡ್ ವಹಿವಾಟುಗಳಲ್ಲಿ ಬಹಳ ಜಾಗರೂಕರಾಗಿರಿ. ಇಲ್ಲದಿದ್ದರೆ ಆದಾಯ ತೆರಿಗೆ ಇಲಾಖೆ ನಿಮಗೆ ಐಟಿ ನೋಟಿಸ್ ಕಳುಹಿಸಬಹುದು. ಅದಕ್ಕಾಗಿಯೇ ಆದಾಯ ತೆರಿಗೆ ಇಲಾಖೆಯ ನೋಟಿಸ್‌ಗೆ ಕಾರಣವಾಗುವ ಏಳು ರೀತಿಯ ವಹಿವಾಟುಗಳ ಬಗ್ಗೆ ಇಲ್ಲಿ ತಿಳಿಯೋಣ.
ವಿದೇಶಿ ಪ್ರಯಾಣ ವೆಚ್ಚಗಳು: ಕೆಲವರು ವಿದೇಶ ಪ್ರವಾಸಕ್ಕಾಗಿ ದುಂದುವೆಚ್ಚ ಮಾಡುತ್ತಾರೆ. ಆದರೆ, ಇದನ್ನು ಸಾಧ್ಯವಾದಷ್ಟು ಮಾಡದಿರುವುದೇ ಉತ್ತಮ. ಏಕೆಂದರೆ ಒಂದು ವರ್ಷದಲ್ಲಿ ವಿದೇಶ ಪ್ರಯಾಣಕ್ಕೆ 2 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿದರೆ ಅದು ತಾನಾಗಿಯೇ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬರುತ್ತದೆ. ಇದರಿಂದ ನಿಮಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರಬಹುದು.
ಅಧಿಕ ಹಣ ಖರ್ಚು:ಕೆಲವರು ಕ್ರೆಡಿಟ್ ಕಾರ್ಡ್ ಬಳಸಿ ಆದಾಯಕ್ಕೂ ಮೀರಿ ಅಧಿಕ ಹಣವನ್ನು ಖರ್ಚು ಮಾಡುತ್ತಾರೆ. ಅಂತಹ ಕ್ರೆಡಿಟ್ ಕಾರ್ಡ್ ವೆಚ್ಚಗಳು ವಾರ್ಷಿಕವಾಗಿ 2 ಲಕ್ಷ ರೂ. ಮೀರಿದರೆ, ಐಟಿ ಇಲಾಖೆಯು ನಿಮ್ಮ ಬಗ್ಗೆ ವಿಶೇಷ ಗಮನ ಹರಿಸುತ್ತದೆ. ನಿಮ್ಮ ಹಣಕಾಸಿನ ವಹಿವಾಟುಗಳನ್ನು ಪ್ರತ್ಯೇಕವಾಗಿ ಟ್ರ್ಯಾಕ್ ಮಾಡುತ್ತದೆ. ಈ ಮಾರ್ಗದಿಂದಲೂ ನಿಮಗೆ ನೋಟಿಸ್ ಬರಬಹುದು.
ಲಕ್ಷಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಬಿಲ್:ಬಳಕೆದಾರರು ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸುತ್ತಿದ್ದರೆ, ಅಂತಹ ವಹಿವಾಟುಗಳನ್ನು ಆದಾಯ ತೆರಿಗೆ ಇಲಾಖೆ ಪರಿಶೀಲಿಸುತ್ತದೆ. ಕ್ರೆಡಿಟ್ ಕಾರ್ಡ್ ವಹಿವಾಟುಗಳು ಮಾತ್ರವಲ್ಲದೇ, ಇತರ ರೀತಿಯ ಹಣಕಾಸಿನ ವಹಿವಾಟುಗಳನ್ನು ಮಾಡಿದಾಲೂ ನಿಮಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರಬಹುದು.
ಷೇರು, ಮ್ಯೂಚುವಲ್ ಫಂಡ್ ಹೂಡಿಕೆಗಳು: ಒಂದು ವರ್ಷದಲ್ಲಿ ನೀವು 10 ಲಕ್ಷ ರೂ.ಗಿಂತ ಹೆಚ್ಚು ಷೇರುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದರೆ, ಆದಾಯ ತೆರಿಗೆ ಇಲಾಖೆಯು ಹೂಡಿಕೆದಾರರ ಹಣಕಾಸು ವಹಿವಾಟುಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ಸರಿಯಾದ ದಾಖಲೆಗಳಿದ್ದರೆ ತೊಂದರೆ ಕಡಿಮೆ. ಇಲ್ಲದಿದ್ದರೆ ಆದಾಯ ತೆರಿಗೆ ನೋಟಿಸ್ ಕಳುಹಿಸುವುದು ಖಚಿತ.