ರೇವಾ (ಮಧ್ಯ ಪ್ರದೇಶ): 50 ವರ್ಷದ ಅತ್ತೆಯನ್ನು 95 ಬಾರಿ ಚಾಕುವಿನಿಂದ ಇರಿದು ಕೊಂದ 24 ವರ್ಷದ ಸೊಸೆಗೆ ಮಧ್ಯ ಪ್ರದೇಶದ ರೇವಾ ಜಿಲ್ಲೆಯ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2022ರಲ್ಲಿ ನಡೆದಿದ್ದ ಈ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ರೇವಾ ಜಿಲ್ಲೆಯ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಈ ತೀರ್ಪು ಪ್ರಕಟಿಸಿದೆ. ಈ ಕೇಸ್ನಲ್ಲಿ ಸರ್ಕಾರಿ ವಕೀಲರಾಗಿ ವಿಕಾಸ್ ದ್ವಿವೇದಿ ವಾದ ಮಂಡಿಸಿದ್ದರು.
ಮಾಂಗವಾ ಪೊಲೀಸ್ ಠಾಣೆಯ ವ್ಯಾಪ್ತಿಯ ಅಟ್ರೈಲಾ ಗ್ರಾಮದ 24 ವರ್ಷದ ಕಂಚಾನ್ ಕೋಲ್ ಎಂಬಾಕೆ ಕೌಟುಂಬಿಕ ಕಲಹಗಳಿಂದ 2022ರ ಜುಲೈ 12 ರಂದು 50 ವರ್ಷದ ಅತ್ತೆ ಸರೋಜ್ ಕೋಲ್ ಅವರನ್ನು ನಿರ್ದಯವಾಗಿ 95 ಬಾರಿ ಇರಿದು ಕೊಂದಿದ್ದರು. ಪ್ರಕರಣ ಸಂದರ್ಭದಲ್ಲಿ ಸಂತ್ರಸ್ತೆ ಮಾತ್ರ ಮನೆಯಲ್ಲಿದ್ದರು ಎಂದು ಅವರ ಮಗ ತಿಳಿಸಿದ್ದರು.
ಸಂತ್ರಸ್ತೆ ಸರೋಜ್ ಕೋಲ್ ಅವರ ಪತಿ ವಾಲ್ಮಿಕ್ ಕೋಲ್ ಅವರು ಸಹ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ. ಕೊಲೆ ಮಾಡಲು ಸೊಸೆಗೆ ಪ್ರಚೋದನೆ ನೀಡಿದ ಆರೋಪದ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದರು.
ಇದನ್ನೂ ಓದಿ:ಮರಳು ತುಂಬಿದ ಟ್ರಕ್ ಪಲ್ಟಿಯಾಗಿ ಒಂದೇ ಕುಟುಂಬದ ಎಂಟು ಮಂದಿ ದಾರುಣ ಸಾವು