ಅಮರಾವತಿ, ಆಂಧ್ರಪ್ರದೇಶ:ತೆಲುಗು ದೇಶಂ ಪಕ್ಷ (ಟಿಡಿಪಿ) ಕೇಂದ್ರ ಸಂಪುಟ ಸೇರಲು ಅಣಿಯಾಗಿದೆ. ಪಕ್ಷದ ಮೂಲಗಳ ಪ್ರಕಾರ, ಟಿಡಿಪಿ ಪಕ್ಷದ ಸದಸ್ಯರು ಕನಿಷ್ಠ 2 ಮತ್ತು 4 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಮೊನ್ನೆ ನಡೆದ ಲೋಕಸಭೆ ಚುನಾವಣೆಯಲ್ಲಿ ಟಿಡಿಪಿ 16 ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ನಂತರದ ಎನ್‌ಡಿಎಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಟಿಡಿಪಿಗೆ 2 ಕ್ಯಾಬಿನೆಟ್ ಸಚಿವ ಸ್ಥಾನಗಳು ಮತ್ತು ಎರಡು ರಾಜ್ಯ ಸಚಿವ ಸ್ಥಾನಗಳು ಸಿಗಬಹುದು ಎಂದು ಪಕ್ಷದ ಮೂಲಗಳು ಅಂದಾಜಿಸುತ್ತಿವೆ.
ಚಂದ್ರಬಾಬು ನಾಯ್ಡು ಈಗಾಗಲೇ ಎನ್‌ಡಿಎ ನಾಯಕರು ಹಾಗೂ ರಾಷ್ಟ್ರಪತಿಗಳನ್ನು ಭೇಟಿ ಮಾಡಲು ಗುರುವಾರ ರಾತ್ರಿಯೇ ದೆಹಲಿಗೆ ತೆರಳಿದ್ದು, ಇಂದು ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಚಿವ ಸ್ಥಾನ ಮತ್ತು ಖಾತೆಗಳ ಕುರಿತು ಚರ್ಚಿಸಲಿದ್ದಾರೆ. ಜೂನ್ 9 ರಂದು ಟಿಡಿಪಿ ಸದಸ್ಯರು ಪ್ರಧಾನಿ ಮೋದಿ ತಂಡದೊಂದಿಗೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಹಿಂದುಳಿದ ವರ್ಗಗಳಿಂದ 6 ಮಂದಿ ಗೆಲುವು: ಕಿಂಜರಾಪು ರಾಮ್ ಮೋಹನ್ ನಾಯ್ಡು ಸೇರಿದಂತೆ ಲೋಕಸಭೆ ಚುನಾವಣೆಯಲ್ಲಿ ಟಿಡಿಪಿಯಿಂದ ಗೆದ್ದವರಲ್ಲಿ ಆರು ಮಂದಿ ಹಿಂದುಳಿದ ವರ್ಗಕ್ಕೆ ಸೇರಿದವರು. ಸತತ ಮೂರನೇ ಬಾರಿಗೆ ಗೆದ್ದಿರುವ ಶ್ರೀಕಾಕುಳಂ ಸಂಸದ ರಾಮಮೋಹನ್ ನಾಯ್ಡು ಅವರ ಹೆಸರು ಸಚಿವ ಸ್ಥಾನಕ್ಕೆ ಪ್ರಮುಖವಾಗಿ ಕೇಳಿ ಬರುತ್ತಿದೆ. ರಾಮಮೋಹನ್ ನಾಯ್ಡು ತಂದೆ ದಿವಂಗತ ಯರ್ರಾನ್ ನಾಯ್ಡು ಅವರು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಹಾಗೂ ಚಂದ್ರಬಾಬು ಅವರ ಆಪ್ತರಾಗಿದ್ದರು. ಯರ್ರಾನ್ ನಾಯ್ಡು ನಿಧನದ ನಂತರ ರಾಮಮೋಹನ್ ನಾಯ್ಡು ರಾಜಕೀಯ ಪ್ರವೇಶಿಸಿದರು.
ಇನ್ನು ಹಿಂದುಳಿದ ವರ್ಗದ ಮೂವರು ಟಿಡಿಪಿ ಸಂಸದರ ಪೈಕಿ ಎಲ್ಲರೂ ಮೊದಲ ಬಾರಿಗೆ ಗೆದ್ದವರು. ಚಂದ್ರಬಾಬು ಅವರ ನಿಕಟವರ್ತಿ ಹಾಗೂ ದಿವಂಗತ ಲೋಕಸಭಾ ಸ್ಪೀಕರ್ ಬಾಲಯೋಗಿ ಅವರ ಪುತ್ರ ಅಮಲಾಪುರಂ ಸಂಸದ ಗಂಟಿ ಹರೀಶ್ ಮಧುರ್ ಅವರೂ ಇದರಲ್ಲಿ ಒಬ್ಬರು. ಹಿಂದಿನ ಚುನಾವಣೆಯಲ್ಲಿ ಸೋತಿದ್ಧ ಹರೀಶ್ ಮಧುರ್ ಈ ಬಾರಿಯ ಚುನಾವಣೆಯಲ್ಲಿ ಗೆದ್ದಿದ್ದಾರೆ. ಉಳಿದ ಇಬ್ಬರೆಂದರೆ ನಿವೃತ್ತ ಐಪಿಎಸ್ ಅಧಿಕಾರಿ ಕೃಷ್ಣ ಪ್ರಸಾದ್ (ಬಾಪಟ್ಲಾ) ಮತ್ತು ನಿವೃತ್ತ ಐಆರ್‌ಎಸ್ ಅಧಿಕಾರಿ ಪ್ರಸಾದ್ ರಾವ್ (ಚಿತ್ತೂರು).