ನವದೆಹಲಿ: ತಾವು ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ತಕ್ಷಣವೇ ಮದ್ಯ ನಿಷೇಧವನ್ನು ಕೊನೆಗೊಳಿಸುವುದಾಗಿ ಜನ್ ಸುರಾಜ್ ಅಭಿಯಾನದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಶನಿವಾರ ಹೇಳಿದ್ದಾರೆ. ಅಕ್ಟೋಬರ್ 2 ರಂದು ಅಧಿಕೃತವಾಗಿ ತಮ್ಮ ಜನ ಸುರಾಜ್ ಪಕ್ಷದ ಸ್ಥಾಪನೆಯ ಕೆಲವೇ ದಿನಗಳ ಮುಂಚೆ ಪ್ರಶಾಂತ್ ಕಿಶೋರ್ ಅವರ ಈ ಘೋಷಣೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಎಎನ್ಐ ಜೊತೆ ಮಾತನಾಡಿದ ಕಿಶೋರ್, "ಅಕ್ಟೋಬರ್ 2ರ ಪಕ್ಷ ಘೋಷಣೆ ಸಮಾರಂಭಕ್ಕೆ ಯಾವುದೇ ವಿಶೇಷ ಸಿದ್ಧತೆಯ ಅಗತ್ಯವಿಲ್ಲ. ಅದಕ್ಕಾಗಿ ನಾವು ಕಳೆದ ಎರಡು ವರ್ಷಗಳಿಂದ ತಯಾರಿ ನಡೆಸುತ್ತಿದ್ದೇವೆ. ಬಿಹಾರದಲ್ಲಿ ಜನ್ ಸುರಾಜ್ ಸರ್ಕಾರ ರಚನೆಯಾದರೆ, ನಾವು ಒಂದು ಗಂಟೆಯೊಳಗೆ ಮದ್ಯ ನಿಷೇಧವನ್ನು ಕೊನೆಗೊಳಿಸುತ್ತೇವೆ" ಎಂದು ಹೇಳಿದರು.
ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ತೇಜಸ್ವಿ ಯಾದವ್ ಅವರ ಯಾತ್ರೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಕನಿಷ್ಠ ಈಗಲಾದರೂ ಅವರು ಮನೆಯಿಂದ ಹೊರಬಂದು ಸಾರ್ವಜನಿಕರನ್ನು ಭೇಟಿಯಾಗುತ್ತಿದ್ದಾರೆ. ಅವರಿಗೆ ನನ್ನ ಶುಭಾಶಯಗಳು." ಎಂದರು.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸೇರಿದ್ದಕ್ಕಾಗಿ ನಿತೀಶ್ ಕುಮಾರ್ ಕೈಮುಗಿದು ಕ್ಷಮೆಯಾಚಿಸಿದ್ದಾರೆ ಎಂದು ತೇಜಸ್ವಿ ಯಾದವ್ ಹೇಳಿರುವುದು ಹಾಗೂ ಆ ಹಿನ್ನೆಲೆಯಲ್ಲಿ ಆರ್ಜೆಡಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವೆ ನಡೆಯುತ್ತಿರುವ ವಾಕ್ಸಮರದ ಬಗ್ಗೆ ಪ್ರತಿಕ್ರಿಯಿಸಿದ ಕಿಶೋರ್, "ಇಬ್ಬರೂ ನಾಯಕರು ಬಿಹಾರಕ್ಕೆ ಹಾನಿ ಮಾಡಿದ್ದಾರೆ" ಎಂದು ಹೇಳಿದರು.
"ಈ ವಿಷಯವು ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರಿಗೇ ಸಂಬಂಧಿಸಿದಾಗಿದ್ದು, ಯಾರು ಯಾರಿಗೆ ಕೈಮುಗಿದು ಕ್ಷಮೆಯಾಚಿಸಿದರು ಎಂಬುದು ಮುಖ್ಯವಲ್ಲ; ಈ ಇಬ್ಬರೂ ನಾಯಕರು ಬಿಹಾರಕ್ಕೆ ಹಾನಿಯನ್ನುಂಟು ಮಾಡಿದ್ದಾರೆ. ಬಿಹಾರದ ಜನ ಕಳೆದ 30 ವರ್ಷಗಳಿಂದ ಇವರಿಬ್ಬರನ್ನೂ ನೋಡಿದ್ದಾರೆ. ಇಬ್ಬರೂ ಬಿಹಾರದಿಂದ ತೊಲಗಲಿ ಎಂಬುದು ನಮ್ಮ ಒತ್ತಾಯವಾಗಿದೆ" ಎಂದು ಪ್ರಶಾಂತ್ ಕಿಶೋರ್ ತಿಳಿಸಿದರು.
ಇದಕ್ಕೂ ಮುನ್ನ ಬಿಹಾರದ ಭೋಜಪುರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕಿಶೋರ್, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ತೀವ್ರ ದಾಳಿ ನಡೆಸಿ ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ಅವರ ಸಾಮರ್ಥ್ಯವನ್ನು ಪ್ರಶ್ನಿಸಿದರು.
"ಸೌಲಭ್ಯಗಳ ಕೊರತೆಯಿಂದ ಯಾವುದೇ ಒಬ್ಬ ವ್ಯಕ್ತಿಯು ಶಿಕ್ಷಣ ಪಡೆಯಲು ಸಾಧ್ಯವಾಗದಿದ್ದರೆ ಅದು ಅರ್ಥವಾಗುವ ಸಂಗತಿ. ಆದರೆ ವ್ಯಕ್ತಿಯೊಬ್ಬನ ಪೋಷಕರು ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ, ಆ ವ್ಯಕ್ತಿಯು 10ನೇ ತರಗತಿಯಲ್ಲಿ ಪಾಸಾಗದಿದ್ದರೆ, ಶಿಕ್ಷಣದ ಬಗ್ಗೆ ಅವರ ದೃಷ್ಟಿಕೋನವನ್ನು ಅದು ಪ್ರತಿಬಿಂಬಿಸುತ್ತದೆ" ಎಂದು ಅವರು ಹೇಳಿದರು.
ತೇಜಸ್ವಿ ಯಾದವ್ ಅವರ ಶೈಕ್ಷಣಿಕ ಹಿನ್ನೆಲೆಯನ್ನು ಟೀಕಿಸಿದ ಕಿಶೋರ್, "9 ನೇ ತರಗತಿಯಲ್ಲಿ ಶಾಲೆ ಬಿಟ್ಟ ವಿದ್ಯಾರ್ಥಿಯೊಬ್ಬ ಬಿಹಾರದ ಅಭಿವೃದ್ಧಿಗೆ ದಾರಿ ತೋರಿಸುತ್ತಿದ್ದಾನೆ. ಆತನಿಗೆ (ತೇಜಸ್ವಿ ಯಾದವ್) ಜಿಡಿಪಿ ಮತ್ತು ಜಿಡಿಪಿ ಬೆಳವಣಿಗೆಯ ನಡುವಿನ ವ್ಯತ್ಯಾಸ ತಿಳಿದಿಲ್ಲ. ಆದರೂ ಬಿಹಾರವನ್ನು ಹೇಗೆ ಅಭಿವೃದ್ಧಿಯತ್ತ ಮುನ್ನಡೆಸುವುದು ಎಂಬುದು ತನಗೆ ತಿಳಿದಿರುವುದಾಗಿ ಹೇಳುತ್ತಾನೆ. ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಅವರ ಪುತ್ರನಾಗಿರುವುದು ಅವರ ಏಕೈಕ ಅರ್ಹತೆಯಾಗಿದೆ" ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ : ಇನ್ನೆರಡು ದಿನಗಳಲ್ಲಿ ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ: ಅರವಿಂದ್ ಕೇಜ್ರಿವಾಲ್ ಘೋಷಣೆ - Arvind Kejriwal to step down