ವಾರಾಣಸಿ, ಉತ್ತರಪ್ರದೇಶ:ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಅವರು ವಾರಾಣಸಿಯ ಡಿಎಂ ಕಚೇರಿಗೆ ಬಿಳಿ ಪೈಜಾಮಾ ಮತ್ತು ನೀಲಿ ಜಾಕೆಟ್‌ನೊಂದಿಗೆ ಪೂರ್ಣ ತೋಳಿನ ಬಿಳಿ ಕುರ್ತಾ ಧರಿಸಿ, ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರಿಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸಹ ಸಾಥ್ ನೀಡಿದರು.
ಹಾಲಿ ಸಂಸದರು ಹಾಗೂ ದೇಶದ ಪ್ರಧಾನಿ, ಬಿಜೆಪಿ ಅಭ್ಯರ್ಥಿಯಾಗಿರುವ ನರೇಂದ್ರ ದಾಮೋದರ್ ದಾಸ್ ಮೋದಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು. ವಾರಾಣಸಿ ಲೋಕಸಭಾ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಮತದಾನ ಜೂನ್ 1 ರಂದು ನಡೆಯಲಿದೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಅವರು ದೇಶದ ಪವಿತ್ರ ದೇವಾಲಯಗಳ ಪಟ್ಟಣ, ಗಂಗಾನದಿಯ ದಡದಲ್ಲಿರುವ ದಶಾಶ್ವಮೇಧ ಘಾಟ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ, ನಂತರ ವಾರಾಣಸಿಯ ಕಾಲ ಭೈರವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು ಮತ್ತು ದೇವಾಲಯದಲ್ಲಿ ಆರತಿ ಮಾಡಿ ತಮ್ಮ ಗೆಲುವು ಆ ಮೂಲಕ ದೇಶದಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬರುವಂತೆ ಆ ದೇವರಲ್ಲಿ ಆಶೀರ್ವಾದ ಬೇಡಿದರು. ಇಂದು ಗಂಗಾ ಸಪ್ತಮಿಯ ಶುಭ ಸಂದರ್ಭದಲ್ಲಿ ಗಂಗಾ ನದಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ ಅವರು ಗಂಗಾ ಆರತಿಯನ್ನೂ ಮಾಡಿ ಗಮನ ಸೆಳೆದರು.
ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಲು ಮೇ 14 ರಂದು ಬೆಳಗ್ಗೆ 11.40 ಅನ್ನೇ ಆಯ್ಕೆ ಮಾಡಿದ್ದು ಏಕೆ?:ಪಿಎಂ ಮೋದಿ ನಿರ್ದಿಷ್ಟವಾಗಿ ಹಲವಾರು ಕಾರಣಗಳನ್ನು ಇಟ್ಟುಕೊಂಡೇ ಮೇ 14 ರಂದೇ ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿಪಡಿಸಿಕೊಂಡಿದ್ದಾರೆ. ಮೇ 14 ಅನ್ನು ಹಿಂದೂ ಧರ್ಮದಲ್ಲಿ ಪವಿತ್ರ ದಿನವಾದ ಗಂಗಾ ಸಪ್ತಮಿ ಎಂದು ಆಚರಿಸಲಾಗುತ್ತದೆ. ಗಂಗಾ ಸಪ್ತಮಿ ಮತ್ತು ಪುಷ್ಯ ನಕ್ಷತ್ರದ ಸಂಯೋಗದಿಂದಾಗಿ ಈ ದಿನ ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ದಿನದಂದು ಕೈಗೊಂಡ ಯಾವುದೇ ಪ್ರಯತ್ನವು ಭಾರಿ ಯಶಸ್ಸನ್ನು ತರುತ್ತದೆ ಅಲ್ಲದೇ, ಯಶಸ್ಸನ್ನು ವರ್ಧಿಸುತ್ತದೆ ಎಂದು ನಂಬಲಾಗಿದೆ. ಒಬ್ಬರ ಆಸೆಗಳನ್ನು ಈಡೇರಿಸಲು ಸಮರ್ಥವಾದ ದಿನ ಇದಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆಯಂತೆ.
ಅಭಿಜಿತ್ ಮುಹೂರ್ತ ಮತ್ತು ಆನಂದ್ ಯೋಗ್ ಸಮಯಕ್ಕೆ ಹೊಂದಿಕೆಯಾಗುವುದರಿಂದ ಪ್ರಧಾನಿ ಮೋದಿ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಲು 11.40ರ ಶುಭ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಅಭಿಜಿತ್ ಮುಹೂರ್ತವು ದಿನದ ಎಂಟನೇ ಮುಹೂರ್ತವಾಗಿದೆ, ಇದು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಸಂಭವಿಸುತ್ತದೆ.
ಮೋದಿ ನಾಮಿನೇಷನ್ ಸಲ್ಲಿಕೆ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಜರಿದ್ದರು. ಯುಪಿ ಸಿಎಂ ಜೊತೆಗೆ ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆಗೆ ಶುಭ ಮುಹೂರ್ತವನ್ನು ನಿರ್ಧರಿಸುವಲ್ಲಿ ಹೆಸರುವಾಸಿಯಾಗಿರುವ ಬ್ರಾಹ್ಮಣ ಸಮುದಾಯದ ಪಂಡಿತ್ ಗಣೇಶ್ವರ್ ಶಾಸ್ತ್ರಿ ಕೂಡ ಹಾಜರಿದ್ದದ್ದು ಮಹತ್ವ ಪಡೆದುಕೊಂಡಿದೆ.
ಇದನ್ನು ಓದಿ:ವಾರಾಣಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ; ಬ್ರಾಹ್ಮಣ, ದಲಿತ ಮತ್ತು ಒಬಿಸಿ ವರ್ಗದವರು ಸೂಚಕರಾಗಿ ಸಹಿ - PM Modi Nomination