ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ನಾಲ್ಕು ವರ್ಷದ ಮಗುವಿನಲ್ಲಿ ಹಕ್ಕಿ ಜ್ವರ ಹೆಚ್9ಎನ್2 ವೈರಸ್ ಪತ್ತೆ ಪ್ರಕರಣವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ದೃಢಪಡಿಸಿದೆ. ಇದು ಭಾರತದಲ್ಲಿ ಪತ್ತೆಯಾದ ಎರಡನೇ ಪ್ರಕರಣವಾಗಿದೆ. 2019ರಲ್ಲಿ ಮೊದಲ ಹೆಚ್9ಎನ್2 ಸೋಂಕು ಪ್ರಕರಣ ವರದಿಯಾಗಿತ್ತು ಎಂದು ತಿಳಿಸಿದೆ.
ಸೋಂಕಿತ ಮಗು ಹೈಪರ್‌ರಿಯಾಕ್ಟಿವ್ ಏರ್‌ವೇ ಕಾಯಿಲೆಯಿಂದ ಬಳಲುತ್ತಿದ್ದ. ಜನವರಿ 26ರಂದು ಜ್ವರ ಮತ್ತು ಕಿಬ್ಬೊಟ್ಟೆಯ ನೋವು ಎಂದು ಶಿಶು ವೈದ್ಯರ ಬಳಿ ತೋರಿಸಲಾಗಿತ್ತು. ಇದೀಗ ಚೇತರಿಸಿಕೊಂಡಿದ್ದು, ಮೇ 1ರಂದು ಆಕ್ಸಿಜನ್ನೊಂದಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ತೀವ್ರ ಉಸಿರಾಟದ ತೊಂದರೆ, ನಿರಂತರ ಜ್ವರ ಮತ್ತು ಕಿಬ್ಬೊಟ್ಟೆಯ ಸೆಳೆತದ ಕಾರಣದಿಂದ ಮಗುವನ್ನು ಸ್ಥಳೀಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ, ಇನ್ಫ್ಲುಯೆನ್ಸ ಬಿ ಮತ್ತು ಅಡೆನೊವೈರಸ್ ಪಾಸಿಟಿವ್ ದೃಢಪಟ್ಟಿತ್ತು. ಆರಂಭದಲ್ಲಿ, ಫೆಬ್ರವರಿ 28ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.