ನವದೆಹಲಿ:ಮುಂಬರುವ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಐದನೇ ಪಟ್ಟಿಯಲ್ಲಿ 111 ಅಭ್ಯರ್ಥಿಗಳ ಹೆಸರನ್ನು ಭಾನುವಾರ ಪ್ರಕಟಿಸಿದೆ. ಇದರಲ್ಲಿ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಹಿಂಸಾಚಾರದಲ್ಲಿ ಬದುಕುಳಿದ ಸಂತ್ರಸ್ತೆ ರೇಖಾ ಪಾತ್ರಾ ಅವರಿಗೆ ಬಸಿರ್‌ಹತ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ.
ಪ.ಬಂಗಾಳದ 19 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ರೇಖಾ ಪಾತ್ರಾ ಅವರು ಸಂದೇಶಖಾಲಿ ಮಹಿಳೆಯರ ಪರವಾಗಿ ಮೊದಲ ಧ್ವನಿ ಎತ್ತಿದ್ದರು. ಈ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಉಚ್ಚಾಟಿತ ಟಿಎಂಸಿ ಶಾಸಕ ಶೇಖ್ ಷಹಜಹಾನ್, ಶಿಬು ಹಜ್ರಾ ಮತ್ತು ಉತ್ತಮ್ ಸರ್ದಾರ್ ಈಗಾಗಲೇ ಜೈಲು ಸೇರಿದ್ದಾರೆ.
ರೇಖಾ ಪಾತ್ರಾ ಪ್ರತಿಕ್ರಿಯೆ:ಬಸಿರ್‌ಹತ್‌ನಿಂದ ತಮ್ಮ ಉಮೇದುವಾರಿಕೆ ಸಲ್ಲಿಸುವ ಕುರಿತು ಮಾತನಾಡಿದ ರೇಖಾ ಪಾತ್ರಾ, "ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳ ಬಯಸುತ್ತೇನೆ. ಸಂದೇಶಖಾಲಿ ಸಂತ್ರಸ್ತರ ಧ್ವನಿ ಕಾರ್ಯನಿರ್ವಹಿಸುತ್ತೇನೆ'' ಎಂದು ಹೇಳಿದರು.
ರೇಖಾ ಪಾತ್ರಾ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ಪಕ್ಷದ ನಾಯಕ ಅಮಿತ್ ಮಾಳವೀಯ ಸ್ವಾಗತಿಸಿದ್ದಾರೆ. "ಬಿಜೆಪಿ ರೇಖಾ ಪಾತ್ರಾ ಅವರನ್ನು ಬಂಗಾಳದ ಬಸಿರ್‌ಹತ್‌ನಿಂದ ಕಣಕ್ಕಿಳಿಸಿದೆ. ಸಂದೇಶಖಾಲಿ ಹಿಂಸಾಚಾರದಲ್ಲಿ ಈ ಸಂತ್ರಸ್ತ ಮಹಿಳೆ ಬದುಕುಳಿದ್ದರು. ಮಮತಾ ಬ್ಯಾನರ್ಜಿ ಅವರು ಮತ ಕೇಳುವ ಮೊದಲು ಮೌನದಲ್ಲಿ ನರಳುತ್ತಿರುವ ಮಹಿಳೆಯರ ಕಣ್ಣೀರು ಒರೆಸಲಿ. ಬಿಜೆಪಿಯು ಸಂದೇಶಖಾಲಿ ಮತ್ತು ಬಂಗಾಳದ ಮಹಿಳೆಯರೊಂದಿಗೆ ಪರವಾಗಿ ನಿಂತಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.