ಮುಂಬೈ, ಮಹಾರಾಷ್ಟ್ರ: ನವೆಂಬರ್ 20 ರಂದು ನಡೆಯುವ ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಅಖಾಡ ಅಂತಿಮಗೊಂಡಿದೆ. ಈ ಬಾರಿ ವಿಧಾನಸಭೆ ಪ್ರವೇಶಿಸಲು ಸುಮಾರು 4140 ಅಭ್ಯರ್ಥಿಗಳು ಅಖಾಡಕ್ಕೆ ಇಳಿದಿದ್ದಾರೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಒಟ್ಟಾರೆ 7,078 ನಾಮಪತ್ರಗಳನ್ನು ಸಲ್ಲಿಸಲಾಗಿತ್ತು. ಅದರಲ್ಲಿ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ನವೆಂಬರ್ ನಾಲ್ಕರಂದು ಒಟ್ಟು 2,038 ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ ಎಸ್ ಚೊಕ್ಕಲಿಂಗಂ ಮಂಗಳವಾರ ಪ್ರಕಟಿಸಿದ್ದಾರೆ. ಈ ಮೂಲಕ ಅಂತಿಮವಾಗಿ 4,140 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವೆಂಬರ್ 20 ರಂದು ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರ ಚುನಾವಣಾಧಿಕಾರಿ ಚೊಕ್ಕಲಿಂಗಂ, "ಒಟ್ಟು 7,078 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 2,038 ಅರ್ಜಿಗಳನ್ನು ಹಿಂಪಡೆಯಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಒಟ್ಟು ಸಂಖ್ಯೆ 4,140" ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ 9.7 ಕೋಟಿಯಷ್ಟು ಅರ್ಹ ಮತದಾರರಿರದ್ದಾರೆ. ಇದರಲ್ಲಿ 5 ಕೋಟಿ 22 ಸಾವಿರದ 739 ಪುರುಷ ಮತದಾರರು ಮತ್ತು 4 ಕೋಟಿ 69 ಲಕ್ಷ 96 ಸಾವಿರದ 279 ಮಹಿಳಾ ಮತದಾರರು ಇದ್ದಾರೆ ಎಂದು ಅವರು ಮಾಹಿತಿ ನೀಡಿದರು.
ವಿಧಾನಸಭಾ ಚುನಾವಣೆಗೆ ಒಟ್ಟು 1,00,186 ಮತಗಟ್ಟೆಗಳಿದ್ದು, 42,604 ನಗರ ಪ್ರದೇಶಗಳಲ್ಲಿ ಮತ್ತು 57,582 ಗ್ರಾಮೀಣ ಪ್ರದೇಶಗಳಲ್ಲಿವೆ ಎಂದು ಸಿಇಒ ವಿವರ ಒದಗಿಸಿದರು.