ಸಂಭಾಲ್: ಉತ್ತರ ಪ್ರದೇಶದ ಸಂಭಾಲ್ದಲ್ಲಿನ ಮಸೀದಿ ಸರ್ವೇ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟಿಸುವ ವೇಳೆ ಹಿಂಸಾಚಾರ ಉಂಟಾಗಿ ಮೂವರು ಸಾವನ್ನಪ್ಪಿ, ಹಲವು ಪೊಲೀಸರು ಗಾಯಗೊಂಡ ಘಟನೆ ಇಂದು ನಡೆದಿದೆ. ಈ ಸಂಬಂಧ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೊರದಾಬಾದ್ ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇಂದು ಮಸೀದಿಯ ಸರ್ವೇ ಕಾರ್ಯ ಮುಗಿಯುತ್ತಿದ್ದಂತೆ ವಿವಿಧೆಡೆಯಿಂದ ಸ್ಥಳೀಯ ಮೂರು ತಂಡಗಳು ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದವು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದಂತೆ ನಿಯಂತ್ರಿಸಲು ಪೊಲೀಸರು ಆಶ್ರವಾಯು ಮತ್ತು ಪ್ಲಾಸ್ಟಿಕ್ ಬುಲೆಟ್ ಸಿಡಿಸಿದರು. ಬಳಿಕ ಇನ್ನೊಂದು ಗ್ರೂಪ್ ವಾಹನಗಳಿಗೆ ಬೆಂಕಿ ಹಚ್ಚಲು ಆರಂಭಿಸಿತು ಜೊತೆಗೆ ಗುಂಡಿನ ದಾಳಿ ಮಾಡಿತು. ಇದರಿಂದ ಪೊಲೀಸ್ ಪಿಆರ್ಒ ಕಾಲಿಗೆ ಗುಂಡು ತಗುಲಿದೆ. ಡೆಪ್ಯೂಟಿ ಕಲೆಕ್ಟರ್ ಸಹ ಗಾಯಗೊಂಡಿದ್ದಾರೆ. 15 ಪೊಲೀಸರು ಗಾಯಗೊಂಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾವು ಸ್ಥಳೀಯ ಮುಖಂಡರ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಆಯುಕ್ತ ಸಿಂಗ್ ತಿಳಿಸಿದ್ದಾರೆ. ಮೃತರನ್ನು ನಯೀಮ್, ಬಿಲಾಲ್ ಮತ್ತು ನೌಮನ್ ಎಂದು ಗುರುತಿಸಲಾಗಿದೆ.
ಪೊಲೀಸರನ್ನು ಗುರಿಯಾಗಿಸಿಕೊಂಡು ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಹಲವು ಪೊಲೀಸರು ಗಾಯಗೊಂಡಿದ್ದಾರೆ. ನನಗೂ ಕೂಡ ಕಾಲಿಗೆ ಗಾಯವಾಗಿದೆ. ಅಲ್ಲಿದ್ದ ದ್ವಿಚಕ್ರ ವಾಹನಗಳಿಗೆ ಪ್ರತಿಭಟನಾಕಾರರು ಯಾವುದೇ ಹಾನಿ ಮಾಡಿಲ್ಲ. ಆದರೆ ಪೊಲೀಸ್ ವಾಹನ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಘಟನೆಗೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ, ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ಕೃಷ್ಣಕುಮಾರ್ ತಿಳಿಸಿದ್ದಾರೆ.