ಕರ್ನಾಟಕ

karnataka

ETV Bharat / bharat

ರಾಮನಗರ ಹೆಸರು ಬದಲಾವಣೆ ಮಾಡಿದವರು ಸರ್ವನಾಶ ಆಗ್ತಾರೆ: ಹೆಚ್.ಡಿ.ಕುಮಾರಸ್ವಾಮಿ ಕಿಡಿ - Union Minister H D Kumaraswamy - UNION MINISTER H D KUMARASWAMY

ಹೆಸರು ಬದಲಾವಣೆಯಿಂದ ಭೂಮಿಗೆ ಬೆಲೆ ಬರಲ್ಲ. ಹೆಸರು ಬದಲಾಯಿಸಿದರೆ ಅವರ ಪತನ ಶುರುವಾಯಿತು ಎಂದೇ ಲೆಕ್ಕ ಎಂದು ರಾಷ್ಟ್ರರಾಜಧಾನಿಯಲ್ಲಿ ಹೆಚ್​. ಡಿ. ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Union Minister H D Kumarswamy
ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ (ETV bharat)

By ETV Bharat Karnataka Team

Published : Jul 26, 2024, 8:37 PM IST

ನವದೆಹಲಿ:"ಯಾವುದೇ ಕಾರಣಕ್ಕೂ ರಾಮನಗರದಿಂದ ರಾಮನ ಹೆಸರನ್ನು ಬೇರ್ಪಡಿಸಲು ಆಗಲ್ಲ. ಈ ಭೂಮಿ ಇರುವ ತನಕ ರಾಮನಗರ ಹೆಸರು ತೆಗೆಯಲು ಸಾಧ್ಯ ಆಗುವುದಿಲ್ಲ. ಒಂದು ವೇಳೆ ತಮ್ಮ ಸ್ವಾರ್ಥಕ್ಕಾಗಿ ಹೆಸರು ಬದಲಾವಣೆ ಮಾಡಿದರೆ, ಆ ಕೃತ್ಯ ಎಸಗಿದವರು ಸರ್ವನಾಶ ಆಗುತ್ತಾರೆ" ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನವದೆಹಲಿಯಲ್ಲಿ ಶುಕ್ರವಾರ ಸಂಜೆ ಮಾಧ್ಯಮಗಳ ಜತೆ ಮಾತನಾಡಿದ ಅವರು, "ರಾಮನಗರ ಜಿಲ್ಲೆಯ ಹೆಸರನ್ನು ತೆಗೆದು ಬೆಂಗಳೂರು ದಕ್ಷಿಣ ಎಂದು ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕಟುವಾಗಿ ಟೀಕಿಸಿದರು. "ಜಿಲ್ಲೆ ರಚನೆ ಮಾಡಿ ರಾಮನಗರ ಎಂದು ಹೆಸರಿಡುವಾಗ, ವಿಧಾನಸಭೆ ಕ್ಷೇತ್ರಕ್ಕೆ ರಾಮನಗರ ಎಂದು ಹೆಸರು ಇಡುವಾಗ ಯಾವುದೇ ಮಾತು ಆಡಿಲ್ಲ. ತಕರಾರು ಮಾಡಲಿಲ್ಲ. ಈಗ ಸ್ವಾರ್ಥಕ್ಕಾಗಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.

"ಈ ಸರಕಾರ ಮೊದಲು ಕಾನೂನು ವ್ಯವಸ್ಥೆ ಸರಿ ಮಾಡಲಿ. ಹೆಸರು ಬದಲಾವಣೆ ಮಾಡಲು ಹೊರಟವರ ಪಕ್ಷದ ಎಂಎಲ್​ಸಿ ಇರುವ ಕಡೆ ದಲಿತನ ಕೈ ಕತ್ತರಿಸಿದ್ದಾರೆ. ರಾಮನಗರ ಎಷ್ಟು ಅಭಿವೃದ್ಧಿ ಆಗಿದೆ ಅನ್ನುವುದನ್ನು ನೋಡಲಿ. ಹೆಸರು ಬದಲಾವಣೆಯಿಂದ ಭೂಮಿಗೆ ಬೆಲೆ ಬರಲ್ಲ. ಹೆಸರು ಬದಲಾಯಿಸಿದರೆ ಅವರ ಪತನ ಶುರುವಾಯಿತು ಎಂದೇ ಲೆಕ್ಕ. 2028 ಅಥವಾ ಅದರೊಳಗೆಯೇ ಆ ಜಿಲ್ಲೆಗೆ ರಾಮನಗರ ಹೆಸರು ಮತ್ತೆ ಬರುತ್ತದೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ" ಎಂದು ರಾಜ್ಯದ ಮುಂದಿನ ರಾಜಕೀಯ ಭವಿಷ್ಯವನ್ನು ಸೂಚ್ಯವಾಗಿ ನುಡಿದರು.

ಮುಡಾ ಪ್ರಕರಣ, ಸಿದ್ದರಾಮಯ್ಯಗೆ ಹೆಚ್​ಡಿಕೆ ತಿರುಗೇಟು:ಮುಡಾದಲ್ಲಿ ತಮಗೂ ನಿವೇಶನವಿದೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ನೀಡಿರುವ ಹೇಳಿಕೆ ಬಗ್ಗೆ ತಿರುಗೇಟು ನೀಡಿರುವ ಹೆಚ್​ಡಿಕೆ, "ಸಿದ್ದರಾಮಯ್ಯ ಅವರಂತೆ ನಾನು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಮೈಸೂರಿನಲ್ಲಿ ನನಗೆ ನಿವೇಶನ ಕೊಟ್ಟಿದ್ದಾರೆ ಎಂದಿದ್ದಾರೆ ಅವರಿಬ್ಬರು. ಆದರೆ, ಈವರೆಗೆ ಆ ನಿವೇಶನವನ್ನೇ ನನಗೆ ಕೊಟ್ಟಿಲ್ಲ" ಎಂದು ಸ್ಪಷ್ಟಪಡಿಸಿದರು.

"2006ರಲ್ಲಿಯೇ ನಾನು ಸಿಎಂ ಆಗಿದ್ದೆ. ಅಧಿಕಾರ ದುರುಪಯೋಗ ಮಾಡಿಕೊಳ್ಳಬೇಕು ಎಂದು ನನಗೆ ಅನ್ನಿಸಿದಿದ್ದರೆ ಆಗಲೇ ಆ ನಿವೇಶನವನ್ನು ನನ್ನ ಹೆಸರಿಗೆ ಬರೆಸಿಕೊಳ್ಳಬಹುದಾಗಿತ್ತು. ಆದರೆ, ಸಿದ್ದರಾಮಯ್ಯ ಅವರಂತೆ ನಾನು ಅಧಿಕಾರ ದುರುಪಯೋಗ ಮಾಡಿಕೊಳ್ಳಲಿಲ್ಲ. ಈ ನಿವೇಶನದ ಬಗ್ಗೆ ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ತನಿಖೆ ನಡೆಯುತ್ತಿದೆ. ಲೋಕಾಯುಕ್ತ, ಸಿಐಡಿ ತನಿಖೆಗಳು ನಡೆದು ಹೋಗಿವೆ. 500 ನಿವೇಶನಗಳನ್ನು ದೇವೇಗೌಡರು ಪಡೆದುಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿತ್ತು. ಕೊನೆಗೆ ತನಿಖೆಯಲ್ಲಿ ಒಂದು ನಿವೇಶನವನ್ನಷ್ಟೇ ಪಡೆದುಕೊಂಡಿದ್ದಾರೆ ಎಂದು ಗೊತ್ತಾಯಿತು" ಎಂದು ತಿರುಗೇಟು ಕೊಟ್ಟರು.

"2012ನೇ ಇಸವಿಯಲ್ಲಿ ನಾನು ಮುಡಾಕ್ಕೆ ಪತ್ರ ಬರೆದು ಹಂಚಿಕೆ ಮಾಡಿರುವ ನಿವೇಶನ ಕೊಡಿ ಎಂದು ಮನವಿ ಮಾಡಿದ್ದೆ. 2017ರಲ್ಲಿ ಮತ್ತೊಂದು ಪತ್ರವನ್ನೂ ಬರೆದಿದ್ದೆ. ನಾನು ಅಧಿಕಾರ ದುರುಪಯೋಗಪಡಿಸಿಕೊಳ್ಳಲಿಲ್ಲ. ಅಂಥ ಆಲೋಚನೆಯನ್ನೂ ಮಾಡಲಿಲ್ಲ. ನಾನೆಂದೂ ಸಿದ್ದರಾಮಯ್ಯ ಅವರಂತೆ ಅಧಿಕಾರ ದುರುಪಯೋಗ ಮಾಡಿಕೊಳ್ಳಲಿಲ್ಲ" ಎಂದು ಸಿದ್ದರಾಮಯ್ಯಗೆ ಟಾಂಗ್‌ ನೀಡಿದರು.

40 ವರ್ಷವೇ ಆಗಿದೆ, ನಿವೇಶನ ಕೊಟ್ಟಿಲ್ಲ: "ಈ ನಿವೇಶನವನ್ನು ಅವರು ನನಗೆ ಧರ್ಮಕ್ಕೆ ಕೊಡುತ್ತಿಲ್ಲ. ನಾನು 34,000 ರೂ. ಹಣ ಕಟ್ಟಿದ್ದೇನೆ. ಆ ಹಣ ಕಟ್ಟಿ 40 ವರ್ಷಗಳೇ ಆಗಿದೆ. ಇದು ನಿಜವಾದ ಪರಿಸ್ಥಿತಿ. ನನ್ನ ಹೆಸರಿನಲ್ಲಿರುವ ನಿವೇಶನವನ್ನು ಬೇಕಿದ್ದರೆ ನೀವೇ ನಿಮ್ಮ ಮಗನಿಗೋ ಅಥವಾ ನಿಮ್ಮ ಧರ್ಮಪತ್ನಿ ಹೆಸರಿಗೋ ಅಥವಾ ನಿಮ್ಮ ಪರಮಾಪ್ತ ಬೈರತಿ ಸುರೇಶ್ ಹೆಸರಿಗೋ ಇಲ್ಲವೇ ಯಾವುದಾದರೂ ಅನಾಥಾಶ್ರಮಕ್ಕೋ ಬರೆದುಕೊಟ್ಟುಬಿಡಿ. ನನಗೆ ಯಾವ ತಕರಾರೂ ಇಲ್ಲ" ಸಿದ್ದರಾಮಯ್ಯ ಅವರಿಗೆ ಟಾಂಗ್‌ ಕೊಟ್ಟರು.

"ಇವತ್ತು ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆರ್ಭಟ ನೋಡಿದೆ. ಈ ವ್ಯಕ್ತಿ ಯಾವ ಹಿನ್ನೆಲೆಯಿಂದ ಬಂದಿರುವುದು ಎನ್ನುವುದು ನನಗೆ ಗೊತ್ತಿದೆ. ಬೆಂಗಳೂರು ನಗರದಲ್ಲಿ ಈ ಮಹಾಶಯ ಏನೆಲ್ಲಾ, ಯಾವೆಲ್ಲಾ ಭ್ರಷ್ಟಾಚಾರ ಎಸಗಿದ್ದಾರೆ ಎಂದು ತೆಗೆದರೆ ಈ ವ್ಯಕ್ತಿಯ ಅಸಲಿ ಬಂಡವಾಳ ಗೊತ್ತಾಗುತ್ತದೆ. ಬೆಂಗಳೂರು ಸುತ್ತಮುತ್ತಾ ಮಾಡಿದ್ದಾರಲ್ಲ, ಅದನ್ನಷ್ಟೇ ತೆಗೆದಿಟ್ಟರೆ ಸಾಕು" ಎಂದು ಬೈರತಿ ಸುರೇಶ್​ಗೆ ತಿರುಗೇಟು ನೀಡಿದರು.

ನಿಂಗಪ್ಪ ಸ್ವರ್ಗದಿಂದ ಬಂದು ಸಿದ್ದರಾಮಯ್ಯಗೆ ಅರ್ಜಿ ಕೊಟ್ಟರಾ?:"16/2 ಮಾಡಿದ ಮೇಲೆ ಪುನಃ ನಿವೇಶನವನ್ನು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ನಿಂಗಪ್ಪ ಎನ್ನುವ ವ್ಯಕ್ತಿ ಜಮೀನನ್ನು ಡಿನೋಟಿಫಿಕೇಷನ್ ಮಾಡಿ ಎಂದು ಸ್ವರ್ಗದಿಂದ ಇಳಿದುಬಂದು ನಿಮಗೆ ಅರ್ಜಿ ಕೊಟ್ಟಿದ್ದರಾ ಸಿದ್ದರಾಮಯ್ಯ ಅವರೇ? ನಿಂಗಪ್ಪ ಸತ್ತ ಮೇಲೆ ಡಿನೋಟಿಫಿಕೇಶನ್ ಮಾಡಲು ಅರ್ಜಿ ಸಲ್ಲಿಸಲಾಗಿದೆ. 2001, 2003ರಲ್ಲಿ‌ ಸಿಎಂ ಪತ್ನಿಗೆ ಮೈಸೂರಿನ ವಿಜಯನಗರದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. 2005ರಲ್ಲಿ ಕೃಷಿಭೂಮಿ ಎಂದಿದ್ದ ಭೂಮಿಯನ್ನು ಇವರು ಹೇಗೆ ಖರೀದಿ ಮಾಡಿದರು? ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡದೆಯೇ ಭೂ ಪರಿವರ್ತನೆ ಮಾಡಿಕೊಟ್ಟರು. ಅದು ಹೇಗೆ ಮಾಡಿಕೊಟ್ಟರು? ಎಂದು ಪ್ರಶ್ನಿಸಿದರು.

"ಸಿದ್ದರಾಮಯ್ಯ ಅವರು ಆಗ ಈ ರಾಜ್ಯದ ಉಪಮುಖ್ಯಮಂತ್ರಿ ಆಗಿದ್ದರು. ಆಗ ಈ ಮಹಾನುಭಾವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು. ಈ ಹಗರಣವನ್ನು ಬಯಲು ಮಾಡಿದ್ದು, ಎಲ್ಲಾ ದಾಖಲೆಗಳನ್ನು ಹೊರಗೆ ಬಿಟ್ಟಿದ್ದು ಮುಖ್ಯಮಂತ್ರಿ ಕುರ್ಚಿಯ ಮೇಲೆ ಟವೆಲ್ ಹಾಕಿದ ಮಹಾಶಯರು" ಎಂದು ಯಾರ ಹೆಸರನ್ನೂ ಹೇಳದೇ ಕಾಂಗ್ರೆಸ್‌ ಪಕ್ಷದ ಒಳ ರಾಜಕೀಯದ ಬಗ್ಗೆ ಸ್ಫೋಟಕ ವಿಷಯವನ್ನು ಬಹಿರಂಗ ಮಾಡಿದರು.

"ನಿಮ್ಮವರೇ ಕೊಟ್ಟ ದಾಖಲೆಗಳನ್ನು ವಿಪಕ್ಷಗಳು ಚರ್ಚೆ ಮಾಡುತ್ತಿವೆ. ಸರ್ಕಾರಿ ಭೂಮಿಯನ್ನು ನೀವೇ ಕಬಳಿಕೆ ಮಾಡಿ, ಈಗ 64 ಕೋಟಿ ಪರಿಹಾರ ಕೊಡಿ ಎಂದು ಯಾವ ನೈತಿಕತೆ ಮೇಲೆ ಕೇಳುತ್ತಿದ್ದೀರಿ ಸಿದ್ದರಾಮಯ್ಯನವರೇ? ಇಂತಹ ಆರೋಪ ಹೊತ್ತು ಯಾವ ನೈತಿಕತೆ ಇಟ್ಟುಕೊಂಡು ಸಿಎಂ ಕುರ್ಚಿಯಲ್ಲಿ ಕೂತಿದ್ದೀರಿ ಸಿದ್ದರಾಮಯ್ಯನವರೇ?" ಎಂದು ಪ್ರಶ್ನಿಸಿದರು.

ಅಯೋಗ್ಯ ಅಧಿಕಾರಿಗಳನ್ನು ಇಟ್ಟುಕೊಂಡವರನ್ನು ಏನೆಂದು ಕರೆಯಬೇಕು?:"ವಾಲ್ಮಿಕಿ ಹಗರಣ ಸಿದ್ದರಾಮಯ್ಯ ಸರಕಾರದ ಮಾನವನ್ನು ಬೀದಿಯಲ್ಲಿ ಹರಾಜು ಹಾಕಿದೆ. ಹಗರಣ ನಡೆದಿರುವ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಹಾಗಾದರೆ ಹಗರಣದ ಜವಾಬ್ದಾರಿ ಯಾರು ಹೊರಬೇಕು? ಈ ಹಗರಣವನ್ನು ಮಾಡಿರುವವರು ಅಯೋಗ್ಯ ಅಧಿಕಾರಿಗಳು ಎಂದು ಹೇಳಿಕೆ ನೀಡಿದ್ದಾರೆ. ಅಂತಹ ಅಯೋಗ್ಯ ಅಧಿಕಾರಿಗಳನ್ನು ಇಟ್ಟುಕೊಂಡವರನ್ನು ಏನೆಂದು ಕರೆಯಬೇಕು?" ಎಂದು ಡಿಸಿಎಂ ಡಿಕೆಶಿ ಮೇಲೆ ಚಾಟಿ ಬೀಸಿದರು.

"ಅಧಿಕಾರಿ ಕಲ್ಲೇಶರನ್ನು ಅಮಾನತು ಮಾಡಿದ್ದೀರಿ. ಅವರ ಕೈಯಲ್ಲಿ ಜಾರಿ ನಿರ್ದೇಶನಾಲಯದ ವಿರುದ್ಧ ಪೋಲಿಸರಿಗೆ ದೂರು ಕೊಡಿಸಿ ಎಫ್​ಐಆರ್‌ ಮಾಡಿಸಿದ್ದೀರಿ. ಅದಕ್ಕೆ ಹೈಕೋರ್ಟ್‌ ತಡೆ ನೀಡಿದೆ. ನಿಮಗೆ ಯಾರು ಈ ಐಡಿಯಾ ಕೊಟ್ಟರೋ ಗೊತ್ತಿಲ್ಲ, ಆದರೆ; ಅವರು ಸರಿಯಾದ ಐಡಿಯಾನಾದರೂ ನಿಮಗೆ ಕೊಡಬೇಕಿತ್ತು" ಎಂದು ಸಿಎಂಗೆ ಕುಟುಕಿದರು.

"ಎಂಟು ಬಾರಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇನೆ. ತೆರಿಗೆ ಪಾಲು, ರಾಜ್ಯದ ಹಣ ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ. ಈ ಬಗ್ಗೆ ಕೇಂದ್ರ ಸರ್ಕಾರ ಉತ್ತರ ಕೊಟ್ಟಿಲ್ಲ ಎಂದು ಹೇಳಿದ್ದೀರಲ್ಲ ಸಿದ್ದರಾಮಯ್ಯನವರೇ. ನಾನು ಪ್ರಾಮಾಣಿಕ ಎಂದು ಎಷ್ಟು ದಿನ ಹೇಳಿಕೊಳ್ಳುತ್ತೀರಿ. ಇದು ಮುಗಿದ ಆಟ ಸಿದ್ದರಾಮಯ್ಯನವರೇ. ಕಾಂಗ್ರೆಸ್ಸ್​ನವರು ಮೈಸೂರಿಂದ ಬೆಂಗಳೂರಿಗಲ್ಲ, ದೆಹಲಿಗೆ ಪಾದಯಾತ್ರೆ ಬರಲಿ" ಎಂದು ವ್ಯಂಗ್ಯವಾಡಿದರು.

"ಮುಡಾ ಹಗರಣದ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಜಂಟಿಯಾಗಿ ಹೋರಾಟ ನಡೆಸಲಿವೆ. ಈ ಬಗ್ಗೆ ರೂಪುರೇಶೆ ಸಿದ್ಧ ಮಾಡಲು ಎನ್​ಡಿಎ ಸಭೆ ಕರೆದಿದ್ದೇವೆ. ಆ ಸಭೆಯಲ್ಲಿ ಮುಂದಿನ ಹೋರಾಟ ಮತ್ತು ಪಾದಯಾತ್ರೆ ಬಗ್ಗೆ ನಿರ್ಧಾರ ಮಾಡುತ್ತೇವೆ" ಎಂದು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಹಾಗೂ ಸಂಸದ ಮಲ್ಲೇಶ್ ಬಾಬು ಅವರು ಸಚಿವರ ಜತೆಯಲ್ಲಿ ಇದ್ದರು.

ಇದನ್ನೂ ಓದಿ:ಪ್ರಧಾನಿ ಭೇಟಿಯಾದ ಹೆಚ್​ಡಿ ದೇವೇಗೌಡ, ಕುಮಾರಸ್ವಾಮಿ; ಮೋದಿಗೆ ವಿಶೇಷ ಗಿಫ್ಟ್​ - Deve Gowda meets Modi

ABOUT THE AUTHOR

...view details