ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ನಲ್ಲಿ ಖಾಸಗಿ ಕಂಪನಿಯ ವಸತಿ ಶಿಬಿರದಲ್ಲಿ ಕೆಲಸದ ವೇಳೆ ಆರು ಮಂದಿ ಕಾರ್ಮಿಕರು ಮತ್ತು ವೈದ್ಯನ ಹತ್ಯೆ ಮಾಡಿದ್ದ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಶ್ರೀನಗರದ ಹೊರವಲಯದಲ್ಲಿರುವ ದಚಿಗಮ್ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಎನ್ಕೌಂಟರ್ ಮಾಡಿವೆ.
ಹತನಾದ ಉಗ್ರನನ್ನು ಜುನೈದ್ ಅಹ್ಮದ್ ಭಟ್ ಗುರುತಿಸಲಾಗಿದೆ. ಈತ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದವನು. ಈತ ಕಾಶ್ಮೀರದ ಗಗಾಂಗೀರ್ ಮತ್ತು ಇತರ ಸ್ಥಳಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಎಂದು ಸೇನಾ ಮೂಲಗಳು ತಿಳಿಸಿವೆ.
ದಾಳಿ ನಡೆಸಿ ಕಾರ್ಮಿಕರು ಮತ್ತು ವೈದ್ಯನನ್ನು ಬಲಿ ಪಡೆದಿದ್ದ ಉಗ್ರ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಜಮ್ಮು- ಕಾಶ್ಮೀರ ಪೊಲೀಸರು ಮತ್ತು ಸೇನಾ ಪಡೆಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಮಂಗಳವಾರ ಪಾತಕಿ ಸೇನೆಯ ಗುಂಡೇಟಿಗೆ ಬಲಿಯಾಗಲಿದ್ದಾನೆ.
ಎಲ್ಇಟಿಗೆ ಸೇರಿದ್ದ ಉಗ್ರ:'ಎ' ವರ್ಗದ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿದ್ದ ಜುನೈದ್ ಅಹ್ಮದ್ ಭಟ್ ಸೇನಾ ದಾಳಿಗೆ ಹತನಾಗಿದ್ದಾನೆ. ಈತ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ್ದ. ಗಗಾಂಗೀರ್, ಗಂದರ್ಬಾಲ್ ಮತ್ತಿತರ ಪ್ರದೇಶಗಳಲ್ಲಿ ನಡೆದ ದಾಳಿಗಳಲ್ಲಿ ನಾಗರಿಕರ ಹತ್ಯೆ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.