ಅಮರಾವತಿ(ಆಂಧ್ರ ಪ್ರದೇಶ):ಸರ್ಕಾರಿ ಭೂಮಿ ಕಬಳಿಸಿ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ವೈಎಸ್‌ಆರ್‌ಸಿಪಿ ಕೇಂದ್ರ ಕಚೇರಿಯನ್ನು ಕೋರ್ಟ್ ಆದೇಶದ ಮೇರೆಗೆ ನೆಲಸಮಗೊಳಿಸಲಾಗಿದೆ ಎಂದು ತೆಲುಗು ದೇಶಂ ಪಾರ್ಟಿ(ಟಿಡಿಪಿ) ಸ್ಪಷ್ಟಪಡಿಸಿದೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಸೀತಾನಗರದಲ್ಲಿ ಪರವಾನಗಿ ಇಲ್ಲದೆ ನಿರ್ಮಿಸಿದ್ದ ವೈಎಸ್‌ಆರ್‌ಸಿಪಿ ಕಚೇರಿ ಕಟ್ಟಡವನ್ನು ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಸಿಆರ್‌ಡಿಎ), ಮತ್ತು ಮಂಗಳಗಿರಿ ತಾಡೆಪಲ್ಲಿ ನಗರಸಭೆ (ಎಂಟಿಎಂಸಿ) ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಶನಿವಾರ ನೆಲಸಮಗೊಳಿಸಿದರು. ಸುಮಾರು 17 ಎಕರೆ ವಿಸ್ತೀರ್ಣದ ನೀರಾವರಿ ಬೋಟ್ ಯಾರ್ಡ್ ಪ್ರದೇಶ ಇದಾಗಿದೆ. ಇದರಲ್ಲಿ ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ಪಕ್ಷದ ಕಚೇರಿ ನಿರ್ಮಾಣಕ್ಕಾಗಿ 2 ಎಕರೆ ಜಮೀನನ್ನು ಅಕ್ರಮವಾಗಿ ಪಡೆದು ಕಚೇರಿ ನಿರ್ಮಾಣಕ್ಕೆ ಮುಂದಾಗಿತ್ತು. ಈ ಬಗ್ಗೆ ತಾಡೆಪಲ್ಲಿ ನಗರಸಭೆ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ಟಿಡಿಪಿ ಪ್ರಕಟಣೆ ತಿಳಿಸಿದೆ.
ಆಡಳಿತಾರೂಢ ಟಿಡಿಪಿ ಪ್ರಕಾರ, ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ತಾಡೆಪಲ್ಲಿಯ ಸರ್ವೆ ಸಂಖ್ಯೆ 202/ಎ1ರಲ್ಲಿ ಪಕ್ಷದ ಕಚೇರಿಗೆ ಜಮೀನು ಮಂಜೂರು ಮಾಡಿದ್ದರು. ಈ ಎರಡೆಕರೆ ಪ್ರದೇಶದಲ್ಲಿ ಪಕ್ಷದ ಕಚೇರಿ ನಿರ್ಮಿಸಿ ಅಕ್ಕಪಕ್ಕದ 15 ಎಕರೆ ಜಾಗವನ್ನು ವಶಪಡಿಸಿಕೊಳ್ಳಲು ಜಗನ್ ರೆಡ್ಡಿ ಸರ್ಕಾರ ಯೋಜನೆ ರೂಪಿಸಿತ್ತು. ಈ ಸ್ಥಳವನ್ನು ವೈಎಸ್‌ಆರ್‌ಸಿಪಿಗೆ ನೀಡಲು ನೀರಾವರಿ ಇಲಾಖೆ ನಿರಾಕರಿಸಿತ್ತು. ಆದರೂ ಜಗನ್ ಸರ್ಕಾರ ಕಚೇರಿ ನಿರ್ಮಾಣಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಚೇರಿಯನ್ನು ನೆಲಸಮಗೊಳಿಸಲಾಗಿದೆ.
ನ್ಯಾಯಾಲಯದ ಆದೇಶದಂತೆ ವೈಎಸ್‌ಆರ್‌ಸಿಪಿ ಕಚೇರಿಯ ಅಕ್ರಮ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಅಕ್ರಮ ಕಟ್ಟಡಗಳ ನೆಲಸಮಕ್ಕೆ ಮುಂದಾಗದಿದ್ದರೆ ನ್ಯಾಯಾಲಯದ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ವೈಎಸ್‌ಆರ್‌ಸಿಪಿ ಕಚೇರಿ ನಿರ್ಮಾಣಕ್ಕೆ ಜಲಸಂಪನ್ಮೂಲ ಇಲಾಖೆಯ ಭೂಮಿ ನೀಡಲು ಸಾಧ್ಯವಿಲ್ಲ ಎಂದು ಇಲಾಖೆ ನೀಡಿರುವ ಪತ್ರವನ್ನು ಸರ್ಕಾರಿ ಮೂಲಗಳು ಬಿಡುಗಡೆ ಮಾಡಿವೆ.
ಇದನ್ನೂ ಓದಿ:ಹೈದರಾಬಾದ್ನಲ್ಲಿನ ಮಾಜಿ ಸಿಎಂ ಜಗನ್ ನಿವಾಸದ ಶೆಡ್ ನೆಲಸಮ: ಆಂಧ್ರದಲ್ಲೂ ಕ್ರಮಕ್ಕೆ ಜನರ ಆಗ್ರಹ - Lotuspond