ಬೆಟ್ಟಿಯಾ: ಕಳೆದ 36 ಗಂಟೆಗಳಲ್ಲಿ ಕನಿಷ್ಠ ಐದು ಮಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬಿಹಾರದ ಬೆಟ್ಟಿಯಾದಲ್ಲಿರುವ ಲೌರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಥಿಯಾ ಗ್ರಾಮದಲ್ಲಿ ನಡೆದಿದೆ. ಮೃತರ ಕುಟುಂಬ ಸದಸ್ಯರು ಮದ್ಯ ಹಾಗೂ ಗಾಂಜಾ ಸೇವಿಸಿದ ಬಳಿಕ ಸಾವು ಸಂಭವಿಸಿವೆ ಎಂದು ಆರೋಪಿಸಿದ್ದಾರೆ.
ಒಬ್ಬರ ಹಿಂದೆ ಒಬ್ಬರಂತೆ ಐವರ ಸಾವಿನಿಂದ ಗ್ರಾಮದಲ್ಲಿ ಭೀತಿ ಆವರಿಸಿದೆ. ಕುಟುಂಬ ಸದಸ್ಯರು ಎಲ್ಲಾ ಮೃತದೇಹಗಳ ಅಂತ್ಯಕ್ರಿಯೆ ಮುಗಿಸಿದ್ದಾರೆ. ಸಾವಿನ ಬಗ್ಗೆ ಮಾಹಿತಿ ಪಡೆದ ವೈದ್ಯಕೀಯ ತಂಡ ಸ್ಥಳಕ್ಕೆ ಭೇಟಿ ನೀಡಿ, ಸಾವಿಗೆ ಕಾರಣದ ಬಗ್ಗೆ ತನಿಖೆ ಆರಂಭಿಸಿದೆ.
ವಿಷಕಾರಿ ಮದ್ಯ ಸೇವಿಸಿ ಸಾವು: ಮೃತ ಪ್ರದೀಪ್ ಅವರ ಅಣ್ಣ ಮಾತನಾಡಿ, ನನ್ನ ಸಹೋದರ ಗ್ರಾಮದಲ್ಲಿ ಮದ್ಯ ಸೇವಿಸಿದ ಬಳಿಕ ಅವರ ಆರೋಗ್ಯ ಹದಗೆಟ್ಟು ಸಾವನ್ನಪ್ಪಿದರು ಎಂದು ಹೇಳಿದ್ದಾರೆ. ಮನೀಷ್ ಎಂಬ ಮತ್ತೊಬ್ಬ ವ್ಯಕ್ತಿ ಕೂಡ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸುರೇಶ್ ಚೌಧರಿ, ಶಿವ್ ರಾಮ್, ನರಸಿಂಗ್ ಶಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದವರು. ಮೃತರಲ್ಲಿ ಹೆಚ್ಚಿನವರು ಯುವಕರಾಗಿದ್ದಾರೆ.