ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ದೇಶೀಯವಾಗಿ ಅಭಿವೃದ್ಧಿಪಡಿಸಿದ ನಾಗ್ ಎಂಕೆ2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಸೋಮವಾರ ಯಶಸ್ವಿಯಾಗಿ ನಡೆದಿದೆ. ಮೂರನೇ ತಲೆಮಾರಿನ 'ಆಂಟಿ ಟ್ಯಾಂಕ್ ಫೈರ್ ಅಂಡ್ ಫರ್ಗೆಟ್ ಗೈಡೆಡ್ ಕ್ಷಿಪಣಿಯಾದ ನಾಗ್ ಎಂಕೆ2 ಪ್ರಯೋಗವನ್ನು ರಾಜಸ್ಥಾನದ ಪೋಖ್ರಾನ್ನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಪ್ರಯೋಗಗಳ ಸಮಯದಲ್ಲಿ, ಕ್ಷಿಪಣಿಯು ಗರಿಷ್ಠ ಮತ್ತು ಕನಿಷ್ಠ ರೇಂಜ್ನ ಗುರಿಗಳನ್ನು ನಾಶಪಡಿಸುವ ಮೂಲಕ ತನ್ನ ನಿಖರತೆ ಮತ್ತು ಫೈರಿಂಗ್ ಸಾಮರ್ಥ್ಯ ಪ್ರದರ್ಶಿಸಿದೆ.
ರಕ್ಷಣಾ ತಜ್ಞರು ಪ್ರತಿಕ್ರಿಯಿಸಿ, 'ನಾಗ್ ಕ್ಷಿಪಣಿ ವಾಹಕ' (ಆವೃತ್ತಿ 2) ವನ್ನು ಸಹ ಪರೀಕ್ಷೆಯ ಸಮಯದಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಯಶಸ್ವಿ ಪ್ರಯೋಗಗಳೊಂದಿಗೆ, ಈ ಸಂಪೂರ್ಣ ಶಸ್ತ್ರಾಸ್ತ್ರ ವ್ಯವಸ್ಥೆಯು ಈಗ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಮೂರು ಬಾರಿ ನಡೆಸಿದ ಪ್ರಯೋಗದಲ್ಲಿ ಕ್ಷಿಪಣಿ ಹತ್ತಿರದ ಮತ್ತು ದೂರದ ಎಲ್ಲ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸಿತು. ಪೋಖ್ರಾನ್ ಫೀಲ್ಡ್ ರೇಂಜ್ನಲ್ಲಿ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಾಗ್ ಎಂಕೆ-2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆಸಲಾಯಿತು" ಎಂದು ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿ, ನಾಗ್ ಎಂಕೆ2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಭಾರತೀಯ ಸೇನೆ ಮತ್ತು ಕ್ಷಿಪಣಿ ಅಭಿವೃದ್ಧಿಯಲ್ಲಿ ಭಾಗಿಯಾದ ಕೈಗಾರಿಕೆಯನ್ನು ಅಭಿನಂದಿಸಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಇಲಾಖೆಯ ಕಾರ್ಯದರ್ಶಿ ಮತ್ತು ಡಿಆರ್ ಡಿಒ ಅಧ್ಯಕ್ಷ ಸಮೀರ್ ವಿ ಕಾಮತ್ ಅವರು, ಕ್ಷಿಪಣಿಯನ್ನು ಭಾರತೀಯ ಸೇನೆಗೆ ಸೇರ್ಪಡೆಗೆ ಸಿದ್ಧಪಡಿಸಲು ನೆರವಾದ ಎಲ್ಲರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
'ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ 4' ಕಾರ್ಯಾಚರಣೆಯ ಮೌಲ್ಯಮಾಪನವನ್ನು ಯಶಸ್ವಿಯಾಗಿ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಅಡಿಯಲ್ಲಿ ನಡೆಸಲಾಗಿತ್ತು.
ಇದನ್ನೂ ಓದಿ:ಜಮ್ಮು - ಕಾಶ್ಮೀರದಲ್ಲಿ ಹತರಾದ ಶೇ 60ರಷ್ಟು ಉಗ್ರರು ಪಾಕಿಸ್ತಾನಿಯರು: ಸೇನಾ ಮುಖ್ಯಸ್ಥ ಜನರಲ್ ದ್ವಿವೇದಿ