ಲಕ್ನೋ: ರಷ್ಯಾದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತ, ಪಾಕಿಸ್ತಾನದ ಐಎಸ್ಐಗೆ ಭಾರತದ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ ಗೂಢಚಾರನೊಬ್ಬನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ಬಂಧಿತನು ಭಾರತದ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಮಿಲಿಟರಿ ಸಂಸ್ಥೆಗಳ ಕಾರ್ಯತಂತ್ರದ ಚಟುವಟಿಕೆಗಳ ಬಗ್ಗೆ ಪ್ರಮುಖ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ರವಾನೆ ಮಾಡುತ್ತಿದ್ದ ಎಂದು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಭಾನುವಾರ ಇಲ್ಲಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಹಾಪುರ್ ಜಿಲ್ಲೆಯ ಶಾಹ ಮಹಿಯುದ್ದೀನ್ಪುರ ಗ್ರಾಮ ಮತ್ತು ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಜೈವೀರ್ ಸಿಂಗ್ ಎಂಬಾತನ ಪುತ್ರ ಸತೇಂದ್ರ ಸಿವಾಲ್ ಈತನನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ. ಸಿವಾಲ್ ವಿದೇಶಾಂಗ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ರಷ್ಯಾದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಹ್ಯಾಂಡ್ಲರ್ಗಳು ಕೆಲ ವ್ಯಕ್ತಿಗಳ ಮೂಲಕ ಭಾರತೀಯ ಸೇನೆಗೆ ಸಂಬಂಧಿಸಿದ ರಹಸ್ಯ ಮತ್ತು ಕಾರ್ಯತಂತ್ರದ ಪ್ರಮುಖ ಮಾಹಿತಿಗಳನ್ನು ಪಡೆಯಲು ವಿದೇಶಾಂಗ ಸಚಿವಾಲಯದ ಉದ್ಯೋಗಿಗಳಿಗೆ ಹಣದ ಆಮಿಷ ಒಡ್ಡುತ್ತಿರುವ ಬಗ್ಗೆ ವಿವಿಧ ಗೌಪ್ಯ ಮೂಲಗಳಿಂದ ಎಟಿಎಸ್ಗೆ ಮಾಹಿತಿ ಬಂದಿತ್ತು. ಇಂಥ ರಹಸ್ಯ ಮಾಹಿತಿಯ ಸೋರಿಕೆಯಿಂದ ಭಾರತದ ಆಂತರಿಕ ಮತ್ತು ಬಾಹ್ಯ ಸುರಕ್ಷತೆಗೆ ಭಾರಿ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.