ನವದೆಹಲಿ:ಚಂದ್ರ ಮುರಿದು ಬಿದ್ದ ತಾಣ ಎಂದೇ ಬಣ್ಣಿಸಲ್ಪಡುವ ಲಡಾಖ್ಗೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕೋರಿ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ನೇತೃತ್ವದಲ್ಲಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಸೋಮವಾರ ಅಂತ್ಯವಾಗಿದೆ.
ಲಡಾಖ್ ಜನರ ಬೇಡಿಕೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ಬೆನ್ನಲ್ಲೇ ಸೋನಮ್ ಅವರು ತಮ್ಮ ಉಪವಾಸ ಧರಣಿಯನ್ನು ಕೊನೆಗೊಳಿಸಿದರು.
ಅಕ್ಟೋಬರ್ 6ರಿಂದ ದೆಹಲಿಯಲ್ಲಿನ ಲಡಾಖ್ ಭವನದಲ್ಲಿ ಸೋನಮ್ ವಾಂಗ್‌ಚುಕ್ ಅವರ ನೇತೃತ್ವದಲ್ಲಿ ಜನರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇಂದು ಜಮ್ಮು - ಕಾಶ್ಮೀರ ಮತ್ತು ಲಡಾಖ್‌ನ ಜಂಟಿ ಕಾರ್ಯದರ್ಶಿ ಪ್ರಶಾಂತ್ ಲೋಖಂಡೆ ಅವರು ಧರಣಿ ಸ್ಥಳಕ್ಕೆ ಭೇಟಿ ಗೃಹ ಸಚಿವಾಲಯದ ಪತ್ರವನ್ನು ನೀಡಿದರು.
ಅದರಲ್ಲಿ ತಿಳಿಸಿದಂತೆ, ಲಡಾಖ್‌ನ ಬೇಡಿಕಗಳ ಕುರಿತು ಡಿಸೆಂಬರ್ನಲ್ಲಿ ಮಾತುಕತೆ ಪುನಾರಂಭಿಸಲಾಗುವುದು. ಲಡಾಖ್‌ನ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಸಚಿವಾಲಯದ ಉನ್ನತಾಧಿಕಾರ ಸಮಿತಿಯು ಮುಂದಿನ ಸಭೆಯನ್ನು ಡಿಸೆಂಬರ್ 3ರಂದು ನಡೆಸಲಿದೆ ಎಂದು ಗೃಹ ಸಚಿವಾಲಯ ಪತ್ರದಲ್ಲಿ ಭರವಸೆ ನೀಡಿದೆ.
ಪ್ರತಿಭಟನಾಕಾರರಿಗೆ ಸೋನಮ್ ಧನ್ಯವಾದ:ಲಡಾಖ್‌ನ ಜನರು ಹೋರಾಟಕ್ಕಾಗಿ ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಇದು ಲಡಾಖ್‌ನ ಜನರಿಗೆ ಸಂತೋಷದ ಕ್ಷಣವಾಗಿದೆ. ದೆಹಲಿ ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡು, ಉಪವಾಸ ಧರಣಿಯಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದ ಎಂದು ಸೋನಮ್ ವಾಂಗ್‌ಚುಕ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಲಡಾಖ್ಗೆ ವಿಶೇಷ ಸ್ಥಾನಮಾನ ಮತ್ತು ನಾಲ್ಕು ಅಂಶಗಳ ಕಾರ್ಯಸೂಚಿಗಳ ಬಗ್ಗೆ ಅರ್ಥಪೂರ್ಣ ಮಾತುಕತೆ ನಡೆಸುತ್ತದೆ ಎಂಬ ಭರವಸೆ ಹೊಂದಿದ್ದೇನೆ. ಈ ಬಗ್ಗೆ ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಲಡಾಖ್ ಜನರ ನಿರೀಕ್ಷೆಯಾಗಿದೆ ಎಂದರು.
ಲಡಾಖ್ ಅನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸಬೇಕು, ಸಂಸದ್ ಸ್ಥಾನವನ್ನು ಹೆಚ್ಚಿಸಬೇಕು. ಪ್ರತ್ಯೇಕ ನೇಮಕಾತಿ ವಿಭಾಗವನ್ನು ನೀಡಬೇಕು ಎಂದು ಒತ್ತಾಯಿಸಿ ತಮ್ಮ ಬೆಂಬಲಿಗರೊಂದಿಗೆ ಲೇಹ್‌ನಿಂದ ದೆಹಲಿಗೆ ಸೋನಮ್ ವಾಂಗ್‌ಚುಕ್ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗಿದೆ.