ಸೋಲನ್: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಸೌಂದರ್ಯವರ್ಧಕ ಕಾರ್ಖಾನೆಯೊಂದರಲ್ಲಿ ನಿನ್ನೆ ರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಬದ್ದಿ ಪ್ರದೇಶದಲ್ಲಿರುವ ಸುಗಂಧ ದ್ರವ್ಯ ತಯಾರಿಕಾ ಕೇಂದ್ರವಾದ ನಾರ್ ಅರೋಮಾ ಫ್ಯಾಕ್ಟರಿಯಲ್ಲಿ ಸಂಭವಿಸಿದ ಬೆಂಕಿಯನ್ನು ಇದುವರೆಗೂ ನಂದಿಸಲು ಸಾಧ್ಯವಾಗಿಲ್ಲ. ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ. ತಡರಾತ್ರಿಯಿಂದ SDRF, NDRF ಮತ್ತು ಅಗ್ನಿಶಾಮಕ ದಳದ ತಂಡಗಳು ಬೆಂಕಿಯನ್ನು ನಂದಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಿವೆ. ಆದರೆ ರಾಸಾಯನಿಕಗಳು ಇರುವ ಹಿನ್ನೆಲೆಯಲ್ಲಿ ಕಾರ್ಖಾನೆಯೊಳಗೆ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸುವುದು ಕಷ್ಟಕರವಾಗಿ ಪರಿಣಮಿಸಿದೆ.
ಇನ್ನೂ 8 ಮಂದಿಗಾಗಿ ಹುಡುಕಾಟ: ಈ ನಡುವೆ ಬೆಂಕಿ ಹೊತ್ತಿಕೊಂಡಿರುವ ಫ್ಯಾಕ್ಟರಿಯಲ್ಲಿ ಎಂಟು ಮಂದಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಅವರನ್ನು ರಕ್ಷಣೆ ಮಾಡಲು ಜಿಲ್ಲಾಡಳಿತ ಅವಿರತವಾಗಿ ಶ್ರಮಿಸುತ್ತಿದೆ. ಜಿಲ್ಲಾಡಳಿತ ನೀಡಿರುವ ಮಾಹಿತಿ ಅನ್ವಯ, ಈವರೆಗೆ 30 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ಒಬ್ಬರು ಮೃತಪಟ್ಟಿದ್ದು, ಗಾಯಗೊಂಡ 29 ಮಂದಿಯನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಸ್ಥಿತಿ ಅವಲೋಕಿಸಿದ ಆರೋಗ್ಯ ಸಚಿವರು: ಕಾಸ್ಮಿಟಿಕ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ತಡರಾತ್ರಿ ಆರೋಗ್ಯ ಸಚಿವ ಧನಿರಾಮ್ ಶಾಂಡಿಲ್ ಮತ್ತು ಸಿಪಿಎಸ್ ರಾಮಕುಮಾರ್ ಚೌಧರಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಿದರು. ಈ ಬಗ್ಗೆ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರಿಗೂ ಮಾಹಿತಿ ನೀಡಲಾಯಿತು. ಬಳಿಕ ಆಸ್ಪತ್ರೆಗೆ ತೆರಳಿದ ಆರೋಗ್ಯ ಸಚಿವರು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.