ನವದೆಹಲಿ:ರಾಜಕೀಯ ಪಕ್ಷಗಳು ಅನಾಮಧೇಯ ಮೂಲಗಳಿಂದ ನಿಧಿ ಸಂಗ್ರಹಿಸಲು ಅವಕಾಶ ಕಲ್ಪಿಸುವ ಎಲೆಕ್ಟೋರಲ್ ಬಾಂಡ್‌ಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ತನ್ನ ತೀರ್ಪು ಪ್ರಕಟಿಸಲಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಕಳೆದ ವರ್ಷದ ನವೆಂಬರ್ 2 ರಂದು ಈ ವಿಷಯದಲ್ಲಿ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿ, ವಾದ - ಪ್ರತಿವಾದಗಳನ್ನು ಆಲಿಸಿ ಅಂತಿಮವಾಗಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಜನವರಿ 2, 2018 ರಂದು ಸರ್ಕಾರವು ಅಧಿಸೂಚನೆ ಹೊರಡಿಸಿದ ಈ ಯೋಜನೆಯು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆ ತರುವ ಪ್ರಯತ್ನಗಳ ಭಾಗವಾಗಿ ಜಾರಿಗೆ ಬಂದಿತ್ತು. ರಾಜಕೀಯ ಪಕ್ಷಗಳಿಗೆ ನೀಡಿದ ನಗದು ದೇಣಿಗೆಯ ಮೂಲವನ್ನು ಬಹಿರಂಗ ಮಾಡುವಂತಿಲ್ಲ ಎಂಬ ನಿಯಮದೊಂದಿಗೆ ಈ ಯೋಜನೆ ಜಾರಿಗೆ ತರಲಾಗಿತ್ತು. ಯೋಜನೆಯ ನಿಬಂಧನೆಗಳ ಪ್ರಕಾರ, ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 29A ಅಡಿ ನೋಂದಾಯಿಸಲಾದ ರಾಜಕೀಯ ಪಕ್ಷಗಳು ಮಾತ್ರ ಲೋಕಸಭೆ ಅಥವಾ ರಾಜ್ಯ ಶಾಸಕಾಂಗಗಳಿಗೆ ಶೇಕಡಾ 1 ಕ್ಕಿಂತ ಕಡಿಮೆಯಿಲ್ಲದಂತೆ ಕಳೆದ ಚುನಾವಣೆಯಲ್ಲಿ ಪಡೆದ ಮತಗಳ ಆಧಾರದ ಮೇಲೆ, ಅಂತಹ ಪಕ್ಷಗಳು ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಲು ಅರ್ಹವಾಗಿವೆ.