ಕರ್ನಾಟಕ

karnataka

ETV Bharat / bharat

ಬೆಂಗಳೂರು ವಕೀಲರ ಸಂಘದಲ್ಲಿ ಎಸ್ಸಿ-ಎಸ್ಟಿ, ಒಬಿಸಿ ಮೀಸಲಾತಿ ವಿಚಾರ: ಸುದೀರ್ಘ ವಿಚಾರಣೆಯ ಅಗತ್ಯವಿದೆ ಎಂದ ಸುಪ್ರೀಂ - KARNATAKA BAR ELECTION

ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳು, ಎಸ್​ಸಿ ಮತ್ತು ಎಸ್​ಟಿ ವಕೀಲರಿಗೆ ಮೀಸಲಾತಿ ನೀಡಬೇಕು ಎಂಬ ವಿಚಾರ ಗಂಭೀರವಾಗಿದ್ದು, ಸುದೀರ್ಘ ವಿಚಾರಣೆ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಸುಪ್ರೀಂ ಕೋರ್ಟ್, ಬೆಂಗಳೂರು ವಕೀರ ಸಂಘದ ಚುನಾವಣೆ, karnataka bar reservation
ಸುಪ್ರೀಂ ಕೋರ್ಟ್ (Getty Images)

By ETV Bharat Karnataka Team

Published : Feb 15, 2025, 1:34 PM IST

Updated : Feb 15, 2025, 1:51 PM IST

ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಕೀಲರಿಗೆ ಜಾತಿ ಆಧಾರದಲ್ಲಿ ಮೀಸಲಾತಿ ನೀಡುವ ವಿಚಾರ ಗಂಭೀರವಾದುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ತಕ್ಷಣಕ್ಕೆ ಆದೇಶ ನೀಡಲು ನಿರಾಕರಿಸಿದೆ. ಈ ವಿಚಾರ ಅತ್ಯಂತ ಗಂಭೀರವಾದ ವಿಚಾರವಾಗಿದ್ದು, ಸುದೀರ್ಘ ವಿಚಾರಣೆ ನಡೆಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ವಿಚಾರಣೆಯನ್ನು ಸೋಮವಾರಕ್ಕೆ ನಿಗದಿ ಪಡಿಸಿದೆ.

ಅಖಿಲ ಭಾರತ ಹಿಂದುಳಿದ ವರ್ಗಗಳ ವಕೀಲರ ಒಕ್ಕೂಟ ಮತ್ತು ಕರ್ನಾಟಕ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ವಕೀಲರ ಒಕ್ಕೂಟ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ಎನ್‌.ಕೋಟೇಶ್ವರ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಕೀಲರ ಸಂಘಗಳಲ್ಲಿ ವೈವಿಧ್ಯತೆ ಮಹತ್ವವಾಗಿದ್ದು, ಸಂಘವನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಸಲ್ಪಡುವ ರಾಜಕೀಯ ವೇದಿಕೆಯಾಗಲು ಅವಕಾಶ ನೀಡಲಾಗದು ಎಂದು ಪೀಠ ಇದೇ ವೇಳೆ ಸ್ಪಷ್ಟ ಪಡಿಸಿದೆ. ಜೊತೆಗೆ, ಇದು ಗಂಭೀರ ಪರಿಣಾಮಗಳಿಗೆ ಕಾರಣವಾಗುವುದರಿಂದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗದು. ಕೇಂದ್ರ ಸರ್ಕಾರ ಮೀಸಲಾತಿ ಕಲ್ಪಿಸುವಾಗ ತಜ್ಞರ ವರದಿಯನ್ನು ಆಧರಿಸುತ್ತದೆ. ನಗರ ಪ್ರದೇಶಗಳಲ್ಲಿ ಮಹಿಳಾ ವಕೀಲರ ಉಪಸ್ಥಿತಿಯನ್ನು ಪರಿಗಣಿಸಿದ್ದೇವೆ. ಈ ಪ್ರಕರಣದಲ್ಲಿ ದೇಶಾದ್ಯಂತ ಯಾರೆಲ್ಲಾ ಅವಕಾಶ ವಂಚಿತರು ಎಂಬುದನ್ನು ಪತ್ತೆಹಚ್ಚಲು ದತ್ತಾಂಶ ಸಂಗ್ರಹಿಸಲು ಸಮಿತಿಯನ್ನು ನೇಮಿಸಬೇಕಾಗುತ್ತದೆ. ಈಗ ದತ್ತಾಂಶ ಇಲ್ಲದಿರುವುದರಿಂದ ತಕ್ಷಣ ಯಾವುದೇ ತೀರ್ಮಾನ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ವಿಚಾರಣೆ ವೇಳೆ ಹಿರಿಯ ವಕೀಲೆ ಮಾಧವಿ ದಿವಾನ್‌, ಬೆಂಗಳೂರು ವಕೀಲರ ಸಂಘದ ಆಡಳಿತ ಮಂಡಳಿಯಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ಒಬ್ಬರು ಕೂಡ ಎಸ್‌ಸಿ, ಎಸ್‌ಟಿ ಸಮುದಾಯದ ವಕೀಲರು ಸ್ಥಾನ ಪಡೆದಿಲ್ಲ. ಇದು ಗಂಭೀರ ವಿಚಾರವಾಗಿದ್ದು, ಇದು ಪ್ರವೇಶಿಕೆಯ ಪ್ರಶ್ನೆಯಾಗಿದೆ ಎಂದು ವಾದ ಮಂಡಿಸಿದ್ದರು.

ಅರ್ಜಿಯ ಸಂಬಂಧ ಈ ಹಿಂದೆ ವಿಚಾರಣೆ ನಡೆಸಿದ್ದ ಹೈಕೋರ್ಟ್​ ನ್ಯಾಯಪೀಠ, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಗೆ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಕೀಲರಿಗೆ ಮೀಸಲಾತಿ ನೀಡುವ ಸಂಬಂಧ ಸುಪ್ರೀಂಕೋರ್ಟ್​ಗೆ ಮಾತ್ರ ಅಧಿಕಾರವಿದೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತ್ತು. ಅಲ್ಲದೆ, ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ಆದೇಶವನ್ನು ನೀಡಲು ನಿರಾಕರಿಸಿ, ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿತ್ತು.

ನಾಳೆ(ಭಾನುವಾರ) ಚುನಾವಣೆ : ಬೆಂಗಳೂರು ವಕೀಲರ ಸಂಘದ 2025-28ನೇ ಸಾಲಿನ ಆಡಳಿತ ಮಂಡಳಿಯ ಆಯ್ಕೆಗೆ ಫೆ.16ಕ್ಕೆ ಚುನಾವಣೆ ನಿಗದಿಪಡಿಸಿರುವ ಉನ್ನತಾಧಿಕಾರ ಸಮಿತಿ ಮತ್ತು ಮುಖ್ಯ ಚುನಾವಣಾ ಅಧಿಕಾರಿಯು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಆರು ಅರ್ಜಿಗಳು, ಉಪಾಧ್ಯಕ್ಷ ಸ್ಥಾನಕ್ಕೆ 4 ಅರ್ಜಿಗಳು ಮತ್ತು ಖಜಾಂಜಿ(ಮಹಿಳಾ ಮೀಸಲು) 16 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಕೀಲರ ಸಂಘದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಸಾಕ್ಷ್ಯಾಧಾರಗಳಿಲ್ಲದೇ ಎಸ್​ಸಿ - ಎಸ್​ಟಿ ದೌರ್ಜನ್ಯ ಆರೋಪದಲ್ಲಿ ದೂರು: ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಇದನ್ನೂ ಓದಿ: ಪಿಟಿಸಿಎಲ್ ಕಾಯ್ದೆಯಡಿ ಮಂಜೂರಾದ ಜಮೀನು ಮಾರಿ 12 ವರ್ಷದ ಬಳಿಕ ಹಕ್ಕು ಮರುಸ್ಥಾಪನೆಗೆ ಕೋರಿದ್ದ ಅರ್ಜಿ ವಜಾ

Last Updated : Feb 15, 2025, 1:51 PM IST

ABOUT THE AUTHOR

...view details