ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದು ಮಾಡಿದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಜೊತೆಗೆ ಮುಕ್ತ ನ್ಯಾಯಾಲಯದ ವಿಚಾರಣೆಗೂ ಅನುಮತಿ ನಿರಾಕರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅನಾಮಧೇಯ ವ್ಯಕ್ತಿಗಳಿಂದ ರಾಜಕೀಯ ಧನಸಹಾಯದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಜಾರಿಗೆ ತಂದಿತ್ತು. ಇದು ಸಂವಿಧಾನ ಬಾಹಿರ, ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ, ಯೋಜನೆಯನ್ನ ರದ್ದು ಮಾಡಬೇಕು ಎಂದು ಸುಪ್ರೀಂಕೋರ್ಟ್ ಈ ವರ್ಷದ ಫೆಬ್ರವರಿ 15 ರಂದು ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಮರುಪರಿಶೀಲಿಸಿದ ಎಂದು ಕೋರಿ ವಕೀಲ ಮ್ಯಾಥ್ಯೂಸ್ ಜೆ. ನೆಡುಂಪಾರ ಮತ್ತು ಇತರರು ಸಲ್ಲಿಸಿದ ಅರ್ಜಿಗಳನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ನ್ಯಾ.ಸಂಜೀವ್ ಖನ್ನಾ, ನ್ಯಾ. ಬಿ. ಆರ್. ಗವಾಯಿ, ನ್ಯಾ. ಜೆ. ಬಿ. ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠವು ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿ ಅರ್ಜಿಗಳನ್ನು ವಜಾ ಮಾಡಿತು.
ಮರುಪರಿಶೀಲನಾ ಅರ್ಜಿಗಳ ಕೋರಿಕೆಯಲ್ಲಿ ಹುರುಳಿಲ್ಲ. ತಾನು ನೀಡಿದ ಆದೇಶದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಆದ್ದರಿಂದ, ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಪೀಠವು ಆದೇಶದಲ್ಲಿ ತಿಳಿಸಿದೆ. ಮರುಪರಿಶೀಲನಾ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ಪಟ್ಟಿ ಮಾಡುವಂತೆ ಮಾಡಿದ ಮನವಿಯನ್ನೂ ಸಹ ತಿರಸ್ಕರಿಸಿದೆ.
ಏನಿದು 'ಬಾಂಡ್' ಆದೇಶ:ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರ ನೇತೃತ್ವದ ಪಂಚಪೀಠವು ಫೆಬ್ರವರಿ 15 ರಂದು ಈ ತೀರ್ಪು ನೀಡಿತ್ತು. ಚುನಾವಣಾ ಬಾಂಡ್ ಅಸಂವಿಧಾನಿಕ. ರಾಜಕೀಯ ಪಕ್ಷಗಳಿಗೆ ಬಾಂಡ್ಗಳನ್ನು ಕೊಡುವುದನ್ನು ನಿಲ್ಲಿಸಿಬಿಡಿ ಎಂದು ಪೀಠವು ಸೂಚಿಸಿತ್ತು. ಜೊತೆಗೆ ಈವರೆಗೆ ನೀಡಲಾದ ಬಾಂಡ್ಗಳು ಮತ್ತು ಅವುಗಳನ್ನು ಎನ್ಕ್ಯಾಶ್ ಮಾಡಿದ್ದರ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುವಂತೆ ಸೂಚಿಸಿತ್ತು.
ಚುನಾವಣಾ ಬಾಂಡ್ ಯೋಜನೆ:ಕೇಂದ್ರ ಸರ್ಕಾರ 2018ರ ಜನವರಿ 2 ರಂದು ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೆ ತಂದಿತ್ತು. ರಾಜಕೀಯ ಪಕ್ಷಗಳಿಗೆ ನೀಡಲಾಗುವ ನಗದು ದೇಣಿಗೆಗೆ ಪರ್ಯಾಯವಾಗಿ ಬಾಂಡ್ಗಳನ್ನು ಪರಿಚಯಿಸಿತು. ನಿಧಿಯಲ್ಲಿ ಪಾರದರ್ಶಕತೆ ತರುವ ಪ್ರಯತ್ನವಾಗಿ ಇದನ್ನು ಸರ್ಕಾರ ಅನುಷ್ಠಾನಕ್ಕೆ ತಂದಿತ್ತು.
ಇದನ್ನೂ ಓದಿ:ಚುನಾವಣಾ ಬಾಂಡ್ಗಳು ಸಂವಿಧಾನ ಬಾಹಿರ, ತಕ್ಷಣವೇ ರದ್ದು ಮಾಡಿ: ಸುಪ್ರೀಂಕೋರ್ಟ್