ನವದೆಹಲಿ:ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಚುನಾವಣಾ ಬಾಂಡ್‌ಗಳ ಸಂಪೂರ್ಣ ವಿವರವನ್ನು ಬಹಿರಂಗಪಡಿಸಲು ಜೂನ್ 30ರವರೆಗೆ ಕಾಲಾವಕಾಶ ನೀಡಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್ಗೆ ಸೋಮವಾರ ಮನವಿ ಮಾಡಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್, ಚುನಾವಣಾ ಬಾಂಡ್ ಯೋಜನೆ ಅಸಾಂವಿಧಾನಿಕವಾಗಿದೆ ಎಂದು ರದ್ದು ಮಾಡಿ ಆದೇಶಿಸಿತು. ಬಳಿಕ ಬ್ಯಾಂಕ್ನಿಂದ ಪಡೆಯಲಾದ ಬಾಂಡ್‌ಗಳ ವಿವರಗಳನ್ನು ನೀಡಲು ಎಸ್‌ಬಿಐಗೆ ಮಾರ್ಚ್ 6 ಗಡುವು ನೀಡಿತ್ತು. ಆದರೆ, ಈ ಸೀಮಿತ ಅವಧಿಯೊಳಗೆ ಪ್ರತಿ ಬಾಂಡ್‌ನ ಮಾಹಿತಿ ನೀಡಲು ಸಾಧ್ಯವಿಲ್ಲ. ಡೇಟಾ ಸಂಗ್ರಹಿಸುವ ಪ್ರಕ್ರಿಯೆಗೆ ಸಮಯ ಬೇಕು ಎಂದು ಬ್ಯಾಂಕ್ ಹೇಳಿದೆ.
ಈ ಕುರಿತು ಸುಪ್ರೀಂಗೆ ಮನವಿ ಅರ್ಜಿ ಸಲ್ಲಿಸಿದ್ದು, ದಾನಿಗಳ ಗುರುತನ್ನು ಅನಾಮಧೇಯವಾಗಿ ಇಡುವುದಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚುನಾವಣಾ ಬಾಂಡ್‌ಗಳನ್ನು ಡಿಕೋಡಿಂಗ್ ಮಾಡುವುದು ಮತ್ತು ನೀಡಿದ ದೇಣಿಗೆಗಳಿಗೆ ದಾನಿಗಳನ್ನು ಗುರುತಿಸುವುದು ಸಂಕೀರ್ಣ ಪ್ರಕ್ರಿಯೆಯಾಗಿದೆ. ಹೀಗಾಗಿ ನೀಡಿದ ಗಡುವನ್ನು ವಿಸ್ತರಣೆ ಮಾಡಬೇಕು ಎಂದು ಕೋರಲಾಗಿದೆ.
ಬಾಂಡ್‌ನ ವಿತರಣೆ ಡೇಟಾ ಮತ್ತು ಅದರ ನಗದೀಕರಣ ಎರಡು ವಿಭಿನ್ನ ಹಂತದಲ್ಲಿ ನಡೆಸಲಾಗಿದೆ. ಇದಕ್ಕಾಗಿ ಏಕರೂಪದ ದಾಖಲೆ ಸಂಗ್ರಹಿಸಿಲ್ಲ. ದಾನಿಗಳ ಗುರುತು ಬಹಿರಂಗವಾಗದಂತೆ ಮಾಡಲು ಈ ರೀತಿ ಮಾಡಲಾಗಿದೆ. ದಾನಿಗಳ ವಿವರಗಳನ್ನು ನಿಗದಿತ ಶಾಖೆಗಳಲ್ಲಿ ಮುಚ್ಚಿದ ಕವರ್‌ನಲ್ಲಿ ಇರಿಸಲಾಗಿದೆ. ಎಲ್ಲವನ್ನೂ ಕ್ರೋಢೀಕರಿಸಿ ಮಾಹಿತಿ ಕಲೆ ಹಾಕಬೇಕಿದೆ ಎಂದಿದೆ.