ಮುಂಬೈ: ಜನವರಿ 16ರಂದು ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಇರಿದ ಪ್ರಕರಣದಲ್ಲಿ ಬಂಧಿತನಾಗಿರುವ ಬಾಂಗ್ಲಾದೇಶದ ಪ್ರಜೆ ಏಳು ತಿಂಗಳ ಹಿಂದೆಯೇ ಅಕ್ರಮವಾಗಿ ದೇಶದೊಳಗೆ ಪ್ರವೇಶಿಸಿದ್ದ ಮತ್ತು ಮುಂಬೈಗೆ ಬರುವ ಮೊದಲು ಪಶ್ಚಿಮ ಬಂಗಾಳ ನಿವಾಸಿಯೊಬ್ಬನ ಆಧಾರ್ ಕಾರ್ಡ್ ಬಳಸಿ ಸಿಮ್ ಪಡೆದುಕೊಂಡಿದ್ದ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಾಂದ್ರಾದಲ್ಲಿರುವ ಬಾಲಿವುಡ್ ತಾರೆ ಸೈಫ್ ನಿವಾಸದಲ್ಲಿ ಚೂರಿ ಇರಿತ ಘಟನೆಗೆ ಸಂಬಂಧಿಸಿದಂತೆ ನೆರೆಯ ಥಾಣೆ ನಗರದ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ಎಂಬಾತನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಾಯಿಸಿಕೊಂಡ ಫಕೀರ್ ಏಳು ತಿಂಗಳ ಹಿಂದೆ ದವ್ಕಿ ನದಿಯನ್ನು ದಾಟಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾನೆ.
ಭಾರತಕ್ಕೆ ನುಸುಳಿದ ಆರೋಪಿಯು ಪಶ್ಚಿಮ ಬಂಗಾಳದಲ್ಲಿ ಕೆಲ ವಾರಗಳ ಕಾಲ ವಾಸವಿದ್ದ. ನಂತರ ಸ್ಥಳೀಯ ವ್ಯಕ್ತಿಯೊಬ್ಬನ ಆಧಾರ್ ಕಾರ್ಡ್ ಬಳಸಿ ಸಿಮ್ ಪಡೆದುಕೊಂಡು ಉದ್ಯೋಗ ಹುಡುಕಲು ಮುಂಬೈಗೆ ಬಂದಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಬಳಸಿದ ಸಿಮ್ ಕಾರ್ಡ್ ಪಶ್ಚಿಮ ಬಂಗಾಳದ ಖುಕುಮೋನಿ ಜಹಾಂಗೀರ್ ಶೇಖಾ ಎಂಬುವರ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು. ಫಕೀರ್ ಸ್ವತಃ ತನ್ನ ಹೆಸರಲ್ಲೇ ಆಧಾರ್ ಕಾರ್ಡ್ ಪಡೆಯಲು ಪ್ರಯತ್ನಿಸಿದನಾದರೂ ವಿಫಲನಾಗಿದ್ದ ಎಂದು ಅಧಿಕಾರಿ ಹೇಳಿದರು.