ಖೋರ್ಧಾ (ಒಡಿಶಾ):ಒಡಿಶಾದ ದೇವಾಲಯ ನಗರ ಪುರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಇಂದಿನಿಂದ ಆರಂಭವಾಗುವ ಭಗವಾನ್ ಜಗನ್ನಾಥ ವಾರ್ಷಿಕ ರಥಯಾತ್ರೆಗೆ ನಗರ ಸಜ್ಜಾಗಿದೆ. ಈ ಬಾರಿಯ ರಥಯಾತ್ರೆ ವಿಶೇಷವಾಗಿದೆ. ಪ್ರತಿವರ್ಷ ಒಂದು ದಿನ ಮಾತ್ರ ನಡೆಯುತ್ತಿದ್ದ ರಥಯಾತ್ರೆ ಈ ಬಾರಿ ಎರಡು ದಿನ ನೆರವೇರುತ್ತಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಲಕ್ಷಾಂತರ ಭಕ್ತರೊಂದಿಗೆ ಈ ರಥಯಾತ್ರೆಯನ್ನು ವೀಕ್ಷಿಸಲಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ವಿಶೇಷ ವ್ಯವಸ್ಥೆ ಮಾಡಿದೆ. ಯಾತ್ರೆಯನ್ನು ಸುಗಮವಾಗಿ ನಡೆಸಲು ಒಡಿಶಾ ಸರ್ಕಾರ ವಿಸ್ತೃತ ವ್ಯವಸ್ಥೆಗಳನ್ನು ಮಾಡಿದೆ. ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ವಿವಿಧ ವಿಶೇಷ ಧಾರ್ಮಿಕ ಆಚರಣೆ ನಂತರ ರಥಯಾತ್ರೆ:ದೇವರ ಜನ್ಮಸ್ಥಳವೆಂದು ನಂಬಲಾದ ಗುಂಡಿಚಾ ದೇವಾಲಯಕ್ಕೆ ಕರೆದೊಯ್ಯಲು ನಂದಿಘೋಷ, ತಾಳಧ್ವಜ ಮತ್ತು ದರ್ಪದಲನ್ ರಥಗಳನ್ನು ಶ್ರೀಮಂದಿರದ ಸಿಂಘದ್ವಾರದಲ್ಲಿ (ಸಿಂಹದ್ವಾರ) ಸಿದ್ಧವಾಗಿ ಇರಿಸಲಾಗಿದೆ. ಜಗನ್ನಾಥ ದೇವಾಲಯದಲ್ಲಿ ವಿವಿಧ ಧಾರ್ಮಿಕ ಆಚರಣೆಗಳನ್ನು ಪೂರ್ಣಗೊಳಿಸಿದ ನಂತರ ದೇವತೆಗಳ ಪಹಂಡಿ ಬಿಜೆ ಆಚರಣೆಯು ಮಧ್ಯಾಹ್ನ 1:10 ಕ್ಕೆ ಪ್ರಾರಂಭವಾಗಲಿದೆ. ಗಜಪತಿ ರಾಜ ದಿಬ್ಯಸಿಂಗ ದೇಬ ಅವರು ಸಾಯಂಕಾಲ 4 ಗಂಟೆಗೆ ರಥಗಳಿಗೆ ವಿಧಿವಿಧಾನ ನೆರವೇರಿಸುವರು. ಸಾಯಂಕಾಲ 5 ಗಂಟೆಗೆ ರಥೋತ್ಸವ ಆರಂಭವಾಗಲಿದೆ.
ಈ ವರ್ಷ ರಥಯಾತ್ರೆಯ ದಿನದಂದು ದೇವರ ನಬಜೌಬನ್ ದರ್ಶನ ಮತ್ತು ನೇತ್ರೋಸ್ತಾವ್ ಆಚರಣೆಗಳನ್ನು ನಡೆಯುತ್ತದೆ. ಪುರಿ ರಥ ಯಾತ್ರೆಗಾಗಿ 315 ಪ್ಲಸ್ ವಿಶೇಷ ರೈಲುಗಳನ್ನು ಬಿಡಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ರಥಯಾತ್ರೆಗಾಗಿ ಜುಲೈ 7 ಮತ್ತು 8 ರಂದು ಎರಡು ದಿನಗಳ ಸಾರ್ವಜನಿಕ ರಜೆ ಘೋಷಿಸಿದ್ದಾರೆ.
AI ತಂತ್ರಜ್ಞಾನ ಬಳಕೆ:ಭಗವಾನ್ ಜಗನ್ನಾಥ ರಥಯಾತ್ರೆಯ ಸಮಯದಲ್ಲಿ ಪರಿಣಾಮಕಾರಿ ಸಂಚಾರ ಮತ್ತು ಜನಸಂದಣಿ ನಿರ್ವಹಣೆಗಾಗಿ ಒಡಿಶಾ ಪೊಲೀಸರು ಪ್ರಾಯೋಗಿಕ ಆಧಾರದ ಮೇಲೆ AI ತಂತ್ರಜ್ಞಾನವನ್ನು ಬಳಸುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಇದು ಮೊದಲ ಬಾರಿಗೆ, ಪ್ರಾಯೋಗಿಕ ಯೋಜನೆಯಾಗಿ ನಾವು AI ಆಧಾರಿತ CCTV ಕವರೇಜ್ ಅನ್ನು ಬಳಸಲು ಪ್ರಯತ್ನಿಸುತ್ತಿದ್ದೇವೆ. 40 ಕಡೆಗಳಲ್ಲಿ ನಾವು ಸಿಸಿಟಿವಿ ಕ್ಯಾಮೆರಾಗಳನ್ನು ಇರಿಸಿದ್ದೇವೆ. ನಾವು ಸಿಸಿಟಿವಿ ವ್ಯವಸ್ಥೆಯೊಂದಿಗೆ ಸಂಯೋಜಿಸಲಾದ AI ಅನ್ನು ಬಳಸುತ್ತೇವೆ. ಜನಸಂದಣಿ ಪ್ರದೇಶಗಳನ್ನು ಗುರುತಿಸಲು ನಾವು ಡ್ರೋನ್ ವ್ಯವಸ್ಥೆಯನ್ನು ಸಹ ಬಳಸುತ್ತೇವೆ. ಸಾಮಾನ್ಯವಾಗಿ ದೊಡ್ಡ ಟ್ರಾಫಿಕ್ ಜಾಮ್‌ಗಳನ್ನು ನಿಭಾಯಿಸಲು ಮತ್ತು ಪೊಲೀಸ್ ಅಧಿಕಾರಿಗಳಿಗೆ ಸಹಾಯ ಮಾಡಲು 4ರಿಂದ 5 ಸ್ಥಳಗಳನ್ನು ಗುರುತಿಸಲಾಗಿದೆ'' ಎಂದು ಒಡಿಶಾದ ಹೆಚ್ಚುವರಿ ಡಿಜಿಪಿ ದಯಾಳ್ ಗಂಗ್ವಾರ್ ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಭಾರೀ ಮಳೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ - Amarnath Yatra suspended