ನವದೆಹಲಿ/ಬೆಂಗಳೂರು:ಬೆಂಗಳೂರಿನಲ್ಲಿ ದಾಖಲಾಗಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಲು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನವದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಾರೆ.
2023ರ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಪ್ರಮುಖ ಪತ್ರಿಕೆಗಳಲ್ಲಿ ಅವಹೇಳನಕಾರಿ ಜಾಹೀರಾತು ಪ್ರಕಟಿಸಿದ್ದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಜೂನ್ 7 ರಂದು, ಅಂದರೆ ಇಂದು ರಾಹುಲ್ ಗಾಂಧಿ ನ್ಯಾಯಾಲಯದ ಎದುರು ಹಾಜರಾಗುವಂತೆ ಕೋರ್ಟ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅವರು ಇಂದು ಬೆಳಗ್ಗೆಯೇ ನವದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದು, ಈಗ ಬೆಂಗಳೂರು ತಲುಪಿದ್ದಾರೆ.
ಜೂನ್ 1 ರಂದು ಮಾನಹಾನಿ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್, ರಾಹುಲ್ ಗಾಂಧಿಯವರಿಗೆ ಅಂದು ಹಾಜರಾತಿಗೆ ವಿನಾಯತ್ತಿ ನೀಡಿತ್ತು. ಬಿಜೆಪಿ ಪಕ್ಷ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಒಂದು ದಿನಕ್ಕೆ ವಿನಾಯ್ತಿ ನೀಡಿ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತ್ತು. ಮುಂದಿನ ವಿಚಾರಣೆ ವೇಳೆ ಅಂದರೆ ಜೂನ್ 7 ರಂದು ರಾಹುಲ್ ಗಾಂಧಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚನೆ ನೀಡಿ ಆದೇಶ ನೀಡಿತ್ತು.
ಇದಕ್ಕೂ ಮುನ್ನ ವಿಚಾರಣೆ ಸಂದರ್ಭದಲ್ಲಿ ಬಿಜೆಪಿ ಪರ ವಕೀಲರು, ರಾಹುಲ್ ಗಾಂಧಿಗೆ ಈಗಾಗಲೇ ಸಮನ್ಸ್ ಜಾರಿ ಮಾಡಲಾಗಿದೆ. ಆದರೂ ಖುದ್ದು ಹಾಜರಾಗಿಲ್ಲ. ಹೀಗಾಗಿ ವಾರಂಟ್ ಜಾರಿ ಮಾಡಬೇಕು ಎಂದು ಕೋರಿದ್ದರು. ಇದಕ್ಕೆ ಆಕ್ಷೆಪಿಸಿದ್ದ ರಾಹುಲ್ ಗಾಂಧಿ ಪರ ವಕೀಲರು, ನಮ್ಮ ಕಕ್ಷಿದಾರರು ಚುನಾವಣಾ ಕಾರಣದಿಂದ ಖುದ್ದು ಹಾಜರಾಗಿಲ್ಲ. ಮುಂದಿನ ವಿಚಾರಣೆ ವೇಳೆ ಹಾಜರಾಗಲಿದ್ದು, ಖುದ್ದು ಹಾಜರಿಗೆ ವಿನಾಯಿತಿ ನೀಡಬೇಕು ಎಂದು ಕೋರಿದ್ದರು.
ಕೋರ್ಟ್ ಸುತ್ತ ಬಿಗಿಭದ್ರತೆ:ರಾಹುಲ್ ಗಾಂಧಿ ಹಾಜರಾಗಲಿರುವ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ಸಮುಚ್ಚಯದ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ರಾಹುಲ್ ಗಾಂಧಿಯವರ ಆಗಮನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಳ್ಳುವ ಸಾಧ್ಯತೆಯಿದೆ. ಮತ್ತೊಂದೆಡೆ ಹೊರಗಡೆ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ಸಹ ನಡೆಯುವ ಸಾಧ್ಯತೆಯಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭದ್ರತೆ ವಹಿಸಿದ್ದಾರೆ.