ರಾಂಚಿ(ಜಾರ್ಖಂಡ್):ಭೂ ಹಗರಣಕ್ಕೆ ಸಂಬಂಧಿಸಿದಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಸೊರೇನ್ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಭೇಟಿ ಮಾಡಿದ್ದಾರೆ. ಇಲ್ಲಿನ ಐತಿಹಾಸಿಕ ಶಹೀದ್ ಮೈದಾನದಲ್ಲಿ ಸಾರ್ವಜನಿಕ ರ‍್ಯಾಲಿಗೂ ಮುನ್ನ ಮತ್ತು ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಸಮ್ಮಿಶ್ರ ಸರ್ಕಾರವು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಧಿಸಿದ ಬಳಿಕ ರಾಹುಲ್ ಗಾಂಧಿ ಕಲ್ಪನಾ ಸೊರೇನ್ ಅವರನ್ನು ಭೇಟಿಯಾದರು ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಕಲ್ಪನಾ ಸೊರೇನ್ ಅವರೊಂದಿಗೆ ರಾಹುಲ್ ಗಾಂಧಿ ಇರುವ ಫೋಟೋಗಳನ್ನು ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ, ಹೇಮಂತ್ ಸೊರೇನ್ ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದರು. ಆರೋಪಗಳು ಸಾಬೀತಾದರೆ ನಾನು ರಾಜಕೀಯವನ್ನು ತೊರೆಯುತ್ತೇನೆ ಎಂದು ಹೇಳಿದ್ದರು. ವಿಧಾನಸಭೆಯಲ್ಲಿ ನೂತನ ಸಿಎಂ ಚಂಪೈ ಸೊರೇನ್ ಮಂಡಿಸಿದ ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸಿದ ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್, ಕೇಂದ್ರವು ಪಿತೂರಿ ನಡೆಸಿದ ನಂತರ ತನ್ನ ಬಂಧನದಲ್ಲಿ ರಾಜಭವನ ಪ್ರಮುಖ ಪಾತ್ರ ವಹಿಸಿದೆ ಎಂದು ಆರೋಪಿಸಿದ್ದರು. ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಚಿಯ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಸೋರೆನ್ ಅವರನ್ನು ಶುಕ್ರವಾರ ಐದು ದಿನಗಳ ಇಡಿ ಕಸ್ಟಡಿಗೆ ಒಪ್ಪಿಸಿದೆ.