ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನಾರೋಗ್ಯಕ್ಕೆ ಒಳಗಾಗಿದ್ದು, ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಗೈರಾಗಿದ್ದರು. ಇದರ ಬೆನ್ನಲ್ಲೇ ಇದೀಗ ಅವರು ರಾಷ್ಟ್ರ ರಾಜಧಾನಿಯ ವಿಧಾನಸಭಾ ಚುನಾವಣಾ ಪ್ರಚಾರದಿಂದಲೂ ಹೊರಗುಳಿಯಲು ನಿರ್ಧರಿಸಿದ್ದಾರೆ. ನವದೆಹಲಿಯ ಮುಸ್ತಫಾಬಾದ್ನಲ್ಲಿ ಆಯೋಜಿಸಿದ್ದ ಚುನಾವಣಾ ರ‍್ಯಾಲಿಯನ್ನು ರದ್ದು ಗೊಳಿಸಲಾಗಿದೆ. ರಾಹುಲ್ ಗಾಂಧಿ ಅವರು ಹುಷಾರಿಲ್ಲದ ಹಿನ್ನೆಲೆ ವೈದ್ಯಕೀಯ ಸಲಹೆಗೆ ಒಳಗಾಗಿದ್ದು, ಅವರು ಪ್ರಚಾರ ಸಭೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದ್ರ ಯಾದವ್ ತಿಳಿಸಿದ್ದಾರೆ.
ಯಾವುದೇ ಗಾಳಿ ಸುದ್ದಿಗೆ ಕಿವಿಕೊಡಬೇಡಿ:ಇನ್ನು ರಾಹುಲ್ ಗಾಂಧಿ ಚುನಾವಣಾ ಪ್ರಚಾರಗಳ ರದ್ದು ಮಾಡುವ ಮೂಲಕ ಮುಸ್ಲಿಂ ಮತಗಳು ವಿಭಜನೆಯಾಗದಂತೆ ತಡೆದು ಎಎಪಿ ಸಹಾಯ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂಬ ಊಹಾಪೋಹವನ್ನು ಇದೇ ವೇಳೆ ಅವರು ತಳ್ಳಿ ಹಾಕಿದರು. ಇವೆಲ್ಲವೂ ಗಾಳಿ ಸುದ್ದಿಯಾಗಿದ್ದು, ನಾವು ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇವೆ ಎಂದರು.
ಜನವರಿ 26 ರ ಬಳಿಕ ಪ್ರಚಾರ:ಗಣರಾಜ್ಯೋತ್ಸವದ ಬಳಿಕ ನಮ್ಮ ನಾಯಕರು ದೆಹಲಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿಧಾನಸಭಾ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದರು. ಎಎಪಿ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಇದೆ ಎಂದು ಆರೋಪಿಸಿದ ಯಾದವ್, ಕಾಂಗ್ರೆಸ್ ಯಾವುದೇ ಪ್ರಚಾರ ಸಭೆ ನಡೆಸದಿದ್ದಾಗ ದೊಡ್ಡಣ್ಣ (ಬಿಜೆಪಿ) ನಾವು ಚಿಕ್ಕ ತಮ್ಮನಿಗೆ (ಎಎಪಿಗೆ) ಸಹಾಯ ಮಾಡುತ್ತಿದ್ದೇವೆ ಎಂದು ಆರೋಪಿಸುತ್ತಾರೆ. ತಮ್ಮ (ಎಎಪಿ) ದೊಡ್ಡ ಅಣ್ಣ (ಬಿಜೆಪಿ) ವಿರುದ್ಧ ಹೋರಾಟಕ್ಕೆ ಬೆಂಬಲಿಸುವುದಿಲ್ಲ ಎಂದು ಆರೋಪಿಸುತ್ತಾರೆ ಎಂದು ಇದೇ ವೇಳೆ ಎರಡೂ ಪಕ್ಷಗಳ ವಿರುದ್ಧ ಹರಿಹಾಯ್ದರು.