ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ ನಂತರ ಕಾಂಗ್ರೆಸ್ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪದೇ ಪದೆ ಸಂಭವಿಸುತ್ತಿರುವ ಭದ್ರತಾ ಲೋಪಗಳಿಗೆ ಸರ್ಕಾರ ಸಂಪೂರ್ಣ ಜವಾಬ್ದಾರಿ ಹೊರಬೇಕು ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಪಾದಿಸಿದೆ.
ದೋಡಾ ಜಿಲ್ಲೆಯಲ್ಲಿ ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಅಧಿಕಾರಿ ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಕಥುವಾ ಜಿಲ್ಲೆಯ ದೂರದ ಮಚೆಡಿ ಅರಣ್ಯ ಪ್ರದೇಶದಲ್ಲಿ ಸೇನಾ ಗಸ್ತು ತಿರುಗುತ್ತಿದ್ದ ಯೋಧರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಒಂದು ವಾರದ ನಂತರ ಈ ಘಟನೆ ನಡೆದಿದೆ.
ಅಗಲಿದ ಹುತಾತ್ಮರಿಗೆ ಗೌರವ ಸಲ್ಲಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ದುಃಖ ಪೀಡಿತ ಕುಟುಂಬಗಳಿಗೆ ತಮ್ಮ ಸಂತಾಪ ವ್ಯಕ್ತಪಡಿಸಿದರು. ಒಂದರ ನಂತರ ಒಂದರಂತೆ ಇಂಥ ಭಯಾನಕ ಘಟನೆಗಳು ನಡೆಯುತ್ತಿರುವುದು ಅತ್ಯಂತ ದುಃಖಕರ ಮತ್ತು ಆತಂಕಕಾರಿ ಎಂದು ಅವರು ಹೇಳಿದರು.
"ಈ ನಿರಂತರ ಭಯೋತ್ಪಾದಕ ದಾಳಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಹದಗೆಡುತ್ತಿರುವ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿವೆ. ನಮ್ಮ ಸೈನಿಕರು ಮತ್ತು ಅವರ ಕುಟುಂಬಗಳು ಬಿಜೆಪಿಯ ತಪ್ಪು ನೀತಿಗಳ ದುಷ್ಪರಿಣಾಮ ಎದುರಿಸುವಂತಾಗಿದೆ" ಎಂದು ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಪದೇ ಪದೆ ನಡೆಯುತ್ತಿರುವ ಭದ್ರತಾ ಲೋಪದ ಘಟನೆಗಳಿಗೆ ಸರ್ಕಾರವು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು ಮತ್ತು ದೇಶ ಹಾಗೂ ಸೈನಿಕರ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ಪ್ರತಿಯೊಬ್ಬ ದೇಶಭಕ್ತ ಭಾರತೀಯರ ಬೇಡಿಕೆಯಾಗಿದೆ. ಈ ದುಃಖದ ಸಮಯದಲ್ಲಿ, ಇಡೀ ದೇಶವು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನಿಂದ ನಿಂತಿದೆ" ಎಂದು ಅವರು ಹೇಳಿದ್ದಾರೆ
ಘಟನೆಯ ಬಗ್ಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಓರ್ವ ಅಧಿಕಾರಿ ಸೇರಿದಂತೆ ನಾಲ್ವರು ವೀರ ಯೋಧರು ಹುತಾತ್ಮರಾಗಿರುವುದು ತೀವ್ರ ದುಃಖ ತಂದಿದೆ. ಭಾರತ ಮಾತೆಯ ಸೇವೆಯಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ನಮ್ಮ ಧೈರ್ಯಶಾಲಿ ಯೋಧರ ಕುಟುಂಬಗಳಿಗೆ ನಮ್ಮ ಹೃದಯ ಮಿಡಿಯುತ್ತದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ" ಎಂದು ಹೇಳಿದರು.
ಕಳೆದ 78 ದಿನಗಳಲ್ಲಿ ಜಮ್ಮು ಒಂದರಲ್ಲೇ 11 ಭಯೋತ್ಪಾದಕ ದಾಳಿಗಳು ನಡೆದಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. "ಇದೊಂದು ಸಂಪೂರ್ಣವಾಗಿ ಹೊಸ ಬೆಳವಣಿಗೆಯಾಗಿದೆ. ನಾವು ರಾಜಕೀಯ ಪಕ್ಷಗಳ ಎಲ್ಲೆಗಳನ್ನು ಮೀರಿ ಇದಕ್ಕೆ ಪರಿಣಾಮಕಾರಿ ಸಾಮೂಹಿಕ ಪ್ರತಿಕ್ರಿಯೆ ನೀಡಬೇಕು. ಆದರೆ, ಈ ಸಂದರ್ಭದಲ್ಲಿ ಒಂದು ಪ್ರಶ್ನೆಯನ್ನು ಕೇಳಲೇಬೇಕಾಗುತ್ತದೆ: ತಾನು ದೈವಸ್ವರೂಪಿ ಎಂದು ಸ್ವಯಂ ಘೋಷಿತ ಪ್ರಧಾನಿ ಮತ್ತು ಸ್ವಯಂ ಘೋಷಿತ ಚಾಣಕ್ಯನ ಎಲ್ಲಾ ದೊಡ್ಡ ಪ್ರತಿಪಾದನೆಗಳು ಈಗ ಏನಾದವು?" ಎಂದು ರಮೇಶ್ ಎಕ್ಸ್ ನಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ದೇಸಾ ಅರಣ್ಯ ಪ್ರದೇಶದಲ್ಲಿ ಉಗ್ರರ ದಾಳಿ: ಭಯೋತ್ಪಾದಕರ ಪತ್ತೆಗಾಗಿ ಭದ್ರತಾ ಪಡೆ ಹೆಲಿಕಾಪ್ಟರ್ಗಳಿಂದ ತೀವ್ರ ಶೋಧ - Terrorist attack