ವಾರಣಾಸಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಬಗ್ಗೆ ಗಾಂಧಿ ಕುಟುಂಬವೇ ನಿರ್ಧರಿಸುತ್ತದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ರಾಯ್ ತಿಳಿಸಿದ್ದಾರೆ. ರಾಯ್‌ಬರೇಲಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಾರಿ ಕಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ.
ವಾರಣಾಸಿಯಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಸಂವಾದದ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಅಜಯ್ ರಾಯ್ ಮಾತನಾಡುತ್ತ, ರಾಯಬರೇಲಿಯ ಜನರು ತಲೆಮಾರುಗಳಿಂದ ಗಾಂಧಿ ಕುಟುಂಬದೊಂದಿಗೆ ಆಳವಾದ ಸಂಪರ್ಕ ಹೊಂದಿದ್ದಾರೆ. ಈ ಕ್ಷೇತ್ರವು ಗಾಂಧಿ ಕುಟುಂಬದದ್ದು, ಮುಂದೆಯೂ ಗಾಂಧಿ ಕುಟುಂಬದೊಂದಿಗೆ ಉಳಿಯುತ್ತದೆ ಎಂದು ಹೇಳಿದರು. ಇದೇ ವೇಳೆ, ಗಾಂಧಿ ಕುಟುಂಬದಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆಗೆ ರಾಯ್, ಇದನ್ನು ಅವರೇ (ಗಾಂಧಿ ಕುಟುಂಬ) ನಿರ್ಧರಿಸುತ್ತಾರೆ ಎಂದಷ್ಟೇ ಉತ್ತರಿಸಿದರು. ಸೋನಿಯಾ ಗಾಂಧಿ ಹಿಂದೆ ಸರಿದಿರುವುದರಿಂದ ಪುತ್ರಿ ಪ್ರಿಯಾಂಕಾ ಗಾಂಧಿ ರಾಯ್ಬರೇಲಿಯಿಂದ ಸ್ಪರ್ಧಿಸಬಹುದು ಎಂಬ ವದಂತಿ ಹಬ್ಬಿದೆ. ಆದರೆ, ಅದು ಇನ್ನೂ ಖಚಿತವಾಗಿಲ್ಲ.
ಇದನ್ನೂ ಓದಿ:ಲೋಕಸಭೆಗೆ ಸ್ಪರ್ಧಿಸದ ಸೋನಿಯಾ: ರಾಯ್‌ಬರೇಲಿ ಮತದಾರರಿಗೆ ಭಾವನಾತ್ಮಕ ಪತ್ರ
ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ರಾಹುಲ್ ಭೇಟಿ:ಮತ್ತೊಂದೆಡೆ, ಮಣಿಪುರದಿಂದ ಮುಂಬೈಗೆ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ನಡೆಸುತ್ತಿದ್ದಾರೆ. ಶುಕ್ರವಾರ ಉತ್ತರ ಪ್ರದೇಶಕ್ಕೆ ಯಾತ್ರೆಯು ಪ್ರವೇಶಿಸಿದೆ. ರಾಜ್ಯದಲ್ಲಿ ಎರಡನೇ ದಿನವಾದ ಇಂದು ಸಹ ಯಾತ್ರೆ ಮುಂದುವರೆದಿದೆ. ಈ ವೇಳೆ, ರಾಹುಲ್ ಗಾಂಧಿ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಮಾಧ್ಯಮಗಳೊಂದಿಗೆ ಸಂವಾದದ ಸಂದರ್ಭದಲ್ಲಿ ಈ ವಿಷಯವನ್ನೂ ಪ್ರಸ್ತಾಪಿಸಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರಾಯ್, ಬಿಜೆಪಿಯ ಎಲ್ಲ ನಾಯಕರು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಾಗ ಕ್ಯಾಮೆರಾಗಳೊಂದಿಗೆ ಪ್ರವೇಶಿಸಲು ಅನುಮತಿಸಲಾಗುತ್ತದೆ. ಆದರೆ, ರಾಹುಲ್ ಗಾಂಧಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದಾಗ ಯಾವುದೇ ಕ್ಯಾಮೆರಾಗಳಿಗೆ ಅವಕಾಶ ನೀಡಲಿಲ್ಲ. ಇದುವರೆಗೆ ಯಾವುದೇ ಫೋಟೋಗಳನ್ನೂ ದೇವಸ್ಥಾನದ ಆಡಳಿತ ಮಂಡಳಿಯೂ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಇನ್ನು, 'ಭಾರತ್ ಜೋಡೋ ನ್ಯಾಯ್ ಯಾತ್ರೆ'ಯ ಭಾಗವಾಗಿ ಗುಡೌಲಿಯಾ ಛೇದಕದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತವು ಪ್ರೀತಿಯ ದೇಶವಾಗಿದೆ, ದ್ವೇಷದ ದೇಶವಲ್ಲ. ಆದರೆ, ಸಹೋದರರ ನಡುವಿನ ಸಂಘರ್ಷದಿಂದ ದೇಶ ದುರ್ಬಲವಾಗುತ್ತದೆ. ದೇಶವನ್ನು ಒಗ್ಗೂಡಿಸುವುದೇ ನಿಜವಾದ ದೇಶಭಕ್ತಿ ಎಂದರು.
ಇದನ್ನೂ ಓದಿ:ಅಮೇಥಿಯಲ್ಲಿ ಹೊಸ ಮನೆ ಕಟ್ಟಿಸಿದ ಸ್ಮೃತಿ ಇರಾನಿ: ಫೆಬ್ರವರಿ 22ಕ್ಕೆ ಗೃಹಪ್ರವೇಶ