ನವದೆಹಲಿ: ಮೂರನೇ ಬಾರಿ ಪ್ರಧಾನಿ ಮಂತ್ರಿಯಾದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ಬಾರಿಗೆ ನಾಳೆ ಕಾಶಿಗೆ ಭೇಟಿ ನೀಡಲಿದ್ದಾರೆ. ಸತತ ಮೂರನೇ ಬಾರಿ ಈ ಕ್ಷೇತ್ರದಿಂದ ಅವರು ಗೆಲುವು ಸಾಧಿಸಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆ ದೇಗುಲದ ಆಡಳಿತ ಮಂಡಳಿ ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ಈ ದೊಡ್ಡ ಘಟನೆ ಸರಾಗವಾಗಿ ನಡೆಸಲು ಯೋಜಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ದೇಗುಲವನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಪ್ರಧಾನಿ ಆಗಮನ ಹಿನ್ನೆಲೆ ಪ್ರೊಟೋಕಾಲ್ ಅನ್ನು ಪಡೆಯಲಾಗಿದೆ ಎಂದು ಕಾಶಿ ವಿಶ್ವನಾಥ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವ ಭೂಷಣ್ ಮಿಶ್ರಾ ತಿಳಿಸಿದ್ದಾರೆ.
ಕಳೆದ ಬಾರಿ ಪ್ರಧಾನಿ ಮಂತ್ರಿ ಗಂಗಾ ಸಪ್ತಮಿಯ ವಿಶೇಷ ಸಂದರ್ಭದಲ್ಲಿ ಕಾಶಿಗೆ ಆಗಮಿಸಿದ್ದರು. ಇದೀಗ ಅವರು ಮೂರು ದಿನಗಳ ಗಂಗಾ ದಸರಾ ಸಂಭ್ರಮದ ಬಳಿಕ ಭೇಟಿ ನೀಡುತ್ತಿದ್ದು, ಇಲ್ಲಿ 25 ನಿಮಿಷ ಸಮಯ ಕಳೆಯಲಿದ್ದಾರೆ.
ಯಾವುದೇ ಪ್ರಮುಖ ವ್ಯಕ್ತಿಗಳು ದೇಗುಲಕ್ಕೆ ಭೇಟಿನೀಡಿದಾಗ ದೇಗುಲದಿಂದ ಡಮರುಗ ಮತ್ತು ಶಂಖನಾದ ಹಾಗೂ ಮಂತ್ರಗಳ ಪಠಣೆ ಮೂಲಕ ಅವರನ್ನು ಸ್ವಾಗತಿಸಲಾಗುವುದು. ಬಳಿಕ ಕಾಶಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಲಾಗುವುದು. ಈ ನಿಟ್ಟಿನಲ್ಲಿ ನಾವು ಸಜ್ಜಾಗಿದ್ದು, ಅವರನ್ನು ಸಂಪ್ರದಾಯದ ಅನುಸಾರ ಸ್ವಾಗತಿಸಲಾಗುವುದು. ಇದೇ ವೇಳೆ ಭಕ್ತರಿಗೆ ದರ್ಶನಕ್ಕೆ ಯಾವುದೇ ಅನಾನುಕೂಲತೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.