ಕರ್ನಾಟಕ

karnataka

ETV Bharat / bharat

ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ: ಸಂವಿಧಾನ ಶಿಲ್ಪಿಗೆ ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಗೌರವ ನಮನ - Ambedkar Jayanti - AMBEDKAR JAYANTI

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್​ ಧನಕರ್​, ಪ್ರಧಾನಿ ಮೋದಿ, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.

President Murmu, PM Modi pay tributes to BR Ambedkar on his birth anniversary
ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ: ಸಂವಿಧಾನ ಶಿಲ್ಪಿಗೆ ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಗೌರವ ನಮನ ಸಲ್ಲಿಕೆ

By ANI

Published : Apr 14, 2024, 11:16 AM IST

ನವದೆಹಲಿ:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಇಂದು. ಇದರ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಅಂಬೇಡ್ಕರ್​ ಪ್ರತಿಮೆಗೆ ಪುಷ್ಪಗಳನ್ನು ಅರ್ಪಿಸಿ ನಮನ ಸಲ್ಲಿಸಿದರು.

ಸಂಸತ್ತಿನ ಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್​ ಧನಕರ್​, ಪ್ರಧಾನಿ ಮೋದಿ, ರಾಜ್ಯಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಅನೇಕ ಗಣ್ಯರು ಗೌರವ ಸಲ್ಲಿಸಿದರು. ಮತ್ತೊಂದೆಡೆ, ಸುಪ್ರೀಂ ಕೋರ್ಟ್‌ ಆವರಣದಲ್ಲಿ ಸಂವಿಧಾನ ಶಿಲ್ಪಿ ಪ್ರತಿಮೆಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಹಿರಿಯ ವಕೀಲರು ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಜೆಐ ಡಿ.ವೈ.ಚಂದ್ರಚೂಡ್, ''ಇದು ನಮಗೆಲ್ಲರಿಗೂ ಬಹಳ ವಿಶೇಷವಾದ ದಿನ. ನಮ್ಮ ಸಂವಿಧಾನದ ಶಿಲ್ಪಿ ಮತ್ತು ಸಂಪೂರ್ಣ ಸಾಮಾಜಿಕ ಪರಿವರ್ತನೆಯನ್ನು ತಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ. ಭಾರತೀಯ ಸಂವಿಧಾನವನ್ನು ರಚಿಸುವಾಗ ಅವರು ಕೊಟ್ಟ ಸಂದೇಶವು ಇಂದಿಗೂ ಮಾನ್ಯವಾಗಿದೆ'' ಎಂದು ತಿಳಿಸಿದರು.

ಇದೇ ವೇಳೆ, ''ಸಿಂಗಾಪುರದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ಮತ್ತು ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ಅವರ ಸಹೋದ್ಯೋಗಿಗಳು ನಮ್ಮ ಮಧ್ಯೆ ಇರುವುದು ನಮಗೆ ಬಹಳ ವಿಶೇಷವಾಗಿದೆ. ಆದ್ದರಿಂದ ನಾವು ಡಾ.ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಸ್ಮರಿಸುವಾಗ, ಇಂದು ಬೆಳಗ್ಗೆ ಅವರಿಗೆ ಗೌವರ ಸಲ್ಲಿಸುವ ಈ ಸಂದರ್ಭವು ನಮಗೆ ಇನ್ನಷ್ಟು ವಿಶೇಷವಾಗಿಸಿದೆ'' ಎಂದು ಸಿಜೆಐ ಹೇಳಿದರು.

ಅಂಬೇಡ್ಕರ್ ಅವರಿಗೆ ಗೌರವ ಅರ್ಪಿಸಿರುವ ರಾಷ್ಟ್ರಪತಿ ಮುರ್ಮು, ''ನಮ್ಮ ಸಂವಿಧಾನದ ಶಿಲ್ಪಿ ಮತ್ತು ಅತ್ಯಂತ ಶ್ರೇಷ್ಠ ರಾಷ್ಟ್ರ ನಿರ್ಮಾತೃಗಳಲ್ಲಿ ಒಬ್ಬರಾದ ಬಾಬಾಸಾಹೇಬ್ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ಜನ್ಮದಿನದ ಸಂದರ್ಭದಲ್ಲಿ ನಾನು ಎಲ್ಲ ನಾಗರಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ'' ಎಂದು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಉಪ ರಾಷ್ಟ್ರಪತಿ ಧನಕರ್ ಕೂಡ, ''ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನದಂದು ಅವರಿಗೆ ನಮನಗಳು. ಭಾರತದ ಮಹಾನ್ ಪುತ್ರ ಬಾಬಾಸಾಹೇಬರು ಭಾರತೀಯ ಸಂವಿಧಾನದ ಶಿಲ್ಪಿ ಮಾತ್ರವಲ್ಲದೆ ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿದ್ದರು. ಕಾನೂನಿನ ನಿಯಮ, ನಾಗರಿಕ ಸ್ವಾತಂತ್ರ್ಯಗಳು, ಲಿಂಗ ಸಮಾನತೆ ಮತ್ತು ಅಂಚಿನಲ್ಲಿರುವ ವರ್ಗಗಳ ಸಬಲೀಕರಣಕ್ಕೆ ಸಾಂವಿಧಾನಿಕ ಚೌಕಟ್ಟಿನ ಮೂಲಕ ಸಮಾನತೆಯ ಭಾರತವನ್ನು ನಿರ್ಮಿಸಲು ಅವರು ಸಾಮಾಜಿಕ ಬದಲಾವಣೆ ಪ್ರಾರಂಭಿಸಿದರು. ಡಾ.ಅಂಬೇಡ್ಕರ್ ಅವರು ಹಾಕಿಕೊಟ್ಟ ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಮತ್ತು ನ್ಯಾಯಯುತ ಮತ್ತು ಸಮಾನ ಸಮಾಜಕ್ಕಾಗಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಶ್ರಮಿಸೋಣ'' ಎಂದು 'ಎಕ್ಸ್‌' ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ:ಕಾನೂನು ಕ್ಷೇತ್ರದಲ್ಲಿ ಎಐ ಅಳವಡಿಕೆ: ಸಿಜೆಐ ಚಂದ್ರಚೂಡ್​ ಹೇಳಿದ್ದೇನು? - CJI DY Chandrachud

ABOUT THE AUTHOR

...view details