ಕರ್ನಾಟಕ

karnataka

ETV Bharat / bharat

ಜ್ಞಾನವಾಪಿ ಮಸೀದಿ; ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದ ಹಿಂದೂ ಅರ್ಚಕರ ಕುಟುಂಬ.. - Kashi Vishwanath temple

Gyanvapi Mosque: ಬಿಗಿ ಭದ್ರತೆಯಲ್ಲಿ ವಿವಾದಿತ ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ಪೂಜೆಯನ್ನು ನಡೆಸಲಾಗಿದೆ. ವಿಧಿವಿಧಾನಗಳ ಪ್ರಕಾರ ನಡೆದ ಪೂಜೆ ಬಗ್ಗೆ ವ್ಯಾಸ ಕುಟುಂಬದ ಸದಸ್ಯ ಜಿತೇಂದ್ರನಾಥ ವ್ಯಾಸ್ ಮಾಹಿತಿ ನೀಡಿದರು.

ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದ ಹಿಂದೂ ಅರ್ಚಕರ ಕುಟುಂಬ
ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದ ಹಿಂದೂ ಅರ್ಚಕರ ಕುಟುಂಬ

By ETV Bharat Karnataka Team

Published : Feb 1, 2024, 6:50 PM IST

Updated : Feb 1, 2024, 8:07 PM IST

ವಾರಾಣಸಿ:ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂ ಅರ್ಚಕರ ಕುಟುಂಬದ ಸದಸ್ಯರು ಬುಧವಾರ ರಾತ್ರಿ ಬಿಗಿ ಭದ್ರತೆಯಲ್ಲಿ ಪೂಜೆ ಸಲ್ಲಿಸಿದೆ. ಪೂಜಾ ಪದ್ಧತಿಯನ್ನು ನಡೆಸಿಕೊಡಲು ಅನುವು ಮಾಡಿಕೊಡುವಂತೆ ವಾರಾಣಸಿಯ ಜಿಲ್ಲಾ ನ್ಯಾಯಾಲಯವು ಜಿಲ್ಲಾಡಳಿತಕ್ಕೆ ಆದೇಶ ನೀಡಿತ್ತು. ಅದರಂತೆ ಇಲ್ಲಿನ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯ ಬೀಗ ತೆಗೆದು ವಿಧಿವಿಧಾನಗಳ ಪ್ರಕಾರ ಮೂರು ದಶಕಗಳ ಹಿಂದೆ ಸ್ಥಗಿತಗೊಂಡಿದ್ದ ಪೂಜೆಯನ್ನು ನಡೆಸಲಾಯಿತು ಎಂದು ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್ ಕೌನ್ಸಿಲ್ ಅಧ್ಯಕ್ಷ ಡಾ.ನಾಗೇಂದ್ರ ಪಾಂಡೆ ತಿಳಿಸಿದ್ದಾರೆ. ನ್ಯಾಯಾಲಯದ ಆದೇಶ ತಮಗೆ ಖುಷಿ ತಂದಿರುವುದಾಗಿ ಭಕ್ತರು ಕೂಡ ಹೇಳಿಕೊಂಡಿದ್ದಾರೆ.

ವಾರಾಣಸಿಯ ಜಿಲ್ಲಾಧಿಕಾರಿ ಎಸ್ ರಾಜ್ ಲಿಂಗಂ ಮತ್ತು ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ಬುಧವಾರ ತಡರಾತ್ರಿ ಪೂಜೆಯನ್ನು ಪ್ರಾರಂಭಿಸಲಾಯಿತು. ಈ ವಿಚಾರ ಗೊತ್ತಾದ ಬಳಿಕ ಗುರುವಾರ ಬೆಳಗ್ಗೆಯಿಂದಲೇ ವಿಶ್ವನಾಥ ದೇವಸ್ಥಾನಕ್ಕೆ ಬರುವ ಭಕ್ತರು ಹೊರಗಿನಿಂದ ಈ ನೆಲಮಾಳಿಗೆಗೆ ಭೇಟಿ ನೀಡುತ್ತಿದ್ದಾರೆ. 30 ವರ್ಷಗಳ ಸುದೀರ್ಘ ಕಾನೂನು ಸಮರದ ಬಳಿಕ ನೆಲಮಾಳಿಗೆಯಲ್ಲಿ ಪೂಜೆ ಆರಂಭವಾಗಿದೆ. ವಿಶ್ವನಾಥ ದೇವಸ್ಥಾನದ ಆಡಳಿತ ಮಂಡಳಿಯಿಂದ ನೇಮಕಗೊಂಡ ಅರ್ಚಕರು ನಿತ್ಯ ಇಲ್ಲಿ ಪೂಜೆ ಸಲ್ಲಿಸಲಿದ್ದಾರೆ ಎಂದು ವ್ಯಾಸ್ ಕುಟುಂಬದ ಸದಸ್ಯ ಜಿತೇಂದ್ರನಾಥ್ ವ್ಯಾಸ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

45 ನಿಮಿಷಗಳ ಪೂಜೆ: ಬುಧವಾರ ರಾತ್ರಿ 45 ನಿಮಿಷಗಳ ಪೂಜೆ ಸಲ್ಲಿರುವುದಾಗಿ ವ್ಯಾಸ್ ಕುಟುಂಬದ ಸದಸ್ಯ ಜಿತೇಂದ್ರನಾಥ್ ವ್ಯಾಸ್ ಅವರು ಹೇಳಿಕೊಂಡಿದ್ದಾರೆ. ರಾತ್ರಿ 12.30ಕ್ಕೆ ಆರಂಭವಾದ ಪೂಜೆ 1.15ರವರೆಗೂ ನಡೆದಿದೆ. ದೇವಸ್ಥಾನದಲ್ಲಿ ಐವರು ಅರ್ಚಕರು ಸೇರಿದಂತೆ ನಮ್ಮ ಕುಟುಂಬದವರು ಉಪಸ್ಥಿತರಿದ್ದರು.

ಗಣೇಶ್ವರ ಶಾಸ್ತ್ರಿ, ವಿಶ್ವನಾಥ ದೇವಸ್ಥಾನದ ಅರ್ಚಕ ಓಂ ಪ್ರಕಾಶ್ ಮಿಶ್ರಾ, ಪೊಲೀಸ್ ಕಮಿಷನರ್ ಅಶೋಕ್ ಮುತಾ ಜೈನ್ ಮತ್ತು ವಿಭಾಗೀಯ ಆಯುಕ್ತ ಕೌಶಲ್ ರಾಜ್ ಶರ್ಮಾ ಸೇರಿದಂತೆ ಜಿಲ್ಲಾಧಿಕಾರಿ ಎಸ್ ರಾಜ್ ಲಿಂಗಂ ಕೂಡ ಉಪಸ್ಥಿತರಿದ್ದರು. ಹರ್ ಹರ್ ಮಹಾದೇವ್ ಘೋಷಣೆಯೊಂದಿಗೆ ನಾವು ನೆಲಮಾಳಿಗೆ ಪ್ರವೇಶ ಮಾಡಿದೆವು. ಬಳಿಕ ಗಂಗಾಜಲ ಚಿಮುಕಿಸಿ ಎಲ್ಲವನ್ನು ಶುದ್ಧೀಕರಣ ಮಾಡುವ ಕಾರ್ಯ ನಡೆಸಲಾಯಿತು. ನಂತರ, ಕಂಬಗಳ ಮೇಲೆ ಮಾಡಿದ ಆಕೃತಿಗಳಿಗೆ ಗಂಗಾಜಲವನ್ನು ಚಿಮುಕಿಸಿ ಅಲ್ಲಿಯೂ ಶುದ್ಧೀಕರಿಸಲಾಯಿತು. ಪುಷ್ಪಾರ್ಚನೆ ಮತ್ತು ಅಕ್ಷತೆಯೊಂದಿಗೆ ಪೂಜೆ ಆರಂಭವಾಯಿತು. ಹಾನಿಗೊಳಗಾದ ವಿಗ್ರಹಗಳಿಗೂ ಪೂಜೆ ನಡೆಯಿತು. ಸದ್ಯಕ್ಕೆ ಯಾವುದೇ ವಿಗ್ರಹಗಳು ಅಲ್ಲಿಲ್ಲ. ಸ್ವಸ್ತಿ ಪಠಣದೊಂದಿಗೆ ಆರಂಭವಾದ ಪೂಜೆ 1.15ರವರೆಗೂ ನಡೆಯಿತು. ಸಿಹಿ ತಿಂಡಿ, ಹಾಲು ಅರ್ಪಿಸುವ ಮೂಲಕ ಎಲ್ಲ ಪೂಜಾ ವಿಧಿವಿಧಾನಗಳು ಸಂಪನ್ನಗೊಂಡವು. ಪೂಜೆ ಬಳಿಕ ಪ್ರಸಾದ ವಿತರಣೆ ಕೂಡ ನಡೆಸಲಾಯಿತು. ಇದು ನಮ್ಮ ಪೂರ್ವಜರ ಶ್ರಮಕ್ಕೆ ಸಿಕ್ಕ ಪ್ರತಿಫಲ. ​​ನಿತ್ಯ ಪೂಜೆ ನಡೆಯಬೇಕೋ ಬೇಡವೋ ಎಂಬುದರ ಬಗ್ಗೆ ಟ್ರಸ್ಟ್​ ನಿರ್ಧರಿಸುತ್ತದೆ. ವಾರದೊಳಗೆ ಈ ಬಗ್ಗೆ ತೀರ್ಮಾನ ಬರಲಿದೆ. ಇಂದಿನ ಈ ಪೂಜೆಯಿಂದ ತುಂಬಾ ಖುಷಿಯಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಅರ್ಚಕರ ನೇಮಕ:ಟ್ರಸ್ಟ್ ಕೌನ್ಸಿಲ್ ಅಧ್ಯಕ್ಷ ಡಾ.ನಾಗೇಂದ್ರ ಪಾಂಡೆ ಮತ್ತು ಟ್ರಸ್ಟ್ ಸದಸ್ಯ ಚಂದ್ರಮೌಳಿ ಉಪಾಧ್ಯಾಯ ಮತ್ತು ಇತರ ಸದಸ್ಯರ ಸಮ್ಮುಖದಲ್ಲಿ ವಿಶ್ವನಾಥ ದೇವಾಲಯದ ಪರವಾಗಿ ಇಲ್ಲಿ ಇಬ್ಬರು ಅರ್ಚಕರನ್ನು ನೇಮಿಸಲು ನಿರ್ಧರಿಸಲಾಗಿದೆ. ಕಾಶಿ ವಿಶ್ವನಾಥನಿಗೆ ನಾಲ್ಕು ಗಂಟೆಯ ಆರತಿ ಹೇಗೆ ನಡೆಯುತ್ತದೆಯೋ ಅದೇ ರೀತಿ ಇಲ್ಲಿಯೂ ಆರತಿ ನಡೆಯುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಶೀಘ್ರದಲ್ಲೇ ಶ್ರೀಸಾಮಾನ್ಯರಿಗೆ ದರ್ಶನದ ಅವಕಾಶ ಮಾಡಿಕೊಡಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷರು ತಿಳಿಸಿದ್ದಾರೆ.

ಪೂಜೆಗೆ ತಡೆ ಕೋರಿ ಅರ್ಜಿ: ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪ್ರಾರ್ಥನೆಗೆ ಅವಕಾಶ ಮಾಡಿಕುಡುವಂತೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಮಸೀದಿ ಸಮಿತಿ ಸುಪ್ರೀಂ ಮೆಟ್ಟಿಲೇರಿತ್ತು. ಆದರೆ ಅಲ್ಲೂ ಹಿನ್ನಡೆಯಾದ ಪರಿಣಾಮ ಈಗ ಮಸೀದಿ ಸಮಿತಿ ಮತ್ತೆ ಅಲಹಾಬಾದ್ ಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ. ಬಾಬರಿ ಮಸೀದಿ ಧ್ವಂಸಗೊಂಡ ಕೆಲ ದಿನಗಳ ಬಳಿಕ ಜ್ಞಾನವಾಪಿ ಮಸೀದಿಯ ಕೆಳಗಿನ ನೆಲ ಮಾಳಿಗೆಗೆ ಬೀಗ ಮುದ್ರೆ ಹಾಕಲಾಗಿತ್ತು.

Last Updated : Feb 1, 2024, 8:07 PM IST

ABOUT THE AUTHOR

...view details