ವಾರಾಣಸಿ:ವಾರಾಣಸಿಯ ಲೋಕಸಭಾ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾನುವಾರ ವರ್ಚುಯಲ್ ಉಪಾಹಾರ ಸಭೆಯ ಮೂಲಕ ಪಕ್ಷದ ಕಾರ್ಯಕರ್ತರು ಮತ್ತು ಬೂತ್ ಮಟ್ಟದ ಪದಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಲೋಕಸಭೆ ಚುನಾವಣೆಗೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವುದರೊಂದಿಗೆ ಗೆಲುವಿಗೆ ಬೇಕಾದ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ, ಪ್ರಧಾನಿಯವರು ಬನಾರಸಿ ಶೈಲಿಯಲ್ಲಿ ಮಾತನಾಡಿರುವುದು ಕಾರ್ಯಕರ್ತರನ್ನು ಆಕರ್ಷಿಸಿತು.
ನಿಮ್ಮೆಲ್ಲರ ಪರಿಶ್ರಮದಿಂದ ಇಂದು ನಮ್ಮ ಕಾಶಿ ಭಾರತದ ಅಭಿವೃದ್ಧಿಗೆ ಮಾದರಿಯಾಗುತ್ತಿದೆ ಎಂದ ಪ್ರಧಾನಿ ಕಾಶಿಯ ಅಭಿವೃದ್ಧಿ ಮತ್ತು ಪರಂಪರೆಯ ಬಗ್ಗೆ ದೇಶ ಮತ್ತು ವಿಶ್ವದಲ್ಲಿ ಚರ್ಚೆಯಾಗುತ್ತಿದೆ. ಬನಾರಸ್‌ನಲ್ಲಿ ಇಷ್ಟು ಅಭಿವೃದ್ಧಿ ಆಗಬಹುದು ಎಂದು 10 ವರ್ಷಗಳ ಹಿಂದೆ ಯಾರೊಬ್ಬರು ಭಾವಿಸಿರಲಿಲ್ಲ. ಆದರೆ, ಬನಾರಸ್‌ನಲ್ಲಿಯೂ ಅಭಿವೃದ್ಧಿಯ ಗಂಗೆ ವೇಗವಾಗಿ ಹರಿಯಬಹುದು ಎಂದು ನಾವೆಲ್ಲರೂ ತೋರಿಸಿಕೊಟ್ಟಿದ್ದೇವೆ ಎಂದರು.
ಈ ಬಾರಿಯೂ ಪಕ್ಷದ ಗೆಲುವಿನ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದ್ದೇವೆ, ನಾವು ಬಿಜೆಪಿಯ ಜನರು ಕಷ್ಟಪಟ್ಟು ದುಡಿಯುವ ಜನರು. ಹಾಗಾಗಿ ಹಿಂದಿನ ಚುನಾವಣೆ ದಾಖಲೆಗಳನ್ನು ಮುರಿಯಲು ನೀವೆಲ್ಲ ಶ್ರಮಿಸಬೇಕು. 2014 ರಲ್ಲಿ ನಾನು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಬಂದಾಗಿನಿಂದ ಇಂದಿನವರೆಗೆ ಎಲ್ಲ ಕೆಲಸಗಳನ್ನು ನೀವೇ ನಿಭಾಯಿಸಿದ್ದೀರಿ. ನನಗೆ ವಾರಾಣಸಿಯಿಂದ ಸ್ಪರ್ಧಿಸುವಂತೆ ಯಾರೋಬ್ಬರು ಹೇಳಿಲ್ಲ ಗಂಗಾಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ. ನನ್ನನ್ನು ಮಗನಾಗಿ ದತ್ತು ಪಡೆದಿದ್ದಾಳೆ ಎಂದರು.
ಇದೇ ವೇಳೆ, ಕಾರ್ಯಕರ್ತರಿಗೆ ಕೆಲ ಸಲಹೆಗಳನ್ನು ನೀಡಿದ ಅವರು ಮುಂದಿನ ಭಾನುವಾರ ನೀವೆಲ್ಲರೂ ಸೇರಿ ಬೂತ್ ಮಟ್ಟದಲ್ಲಿ ಟಿಫಿನ್ ಸಭೆಯನ್ನು ಆಯೋಜಿಸಿ ಪ್ರತಿಯೊಬ್ಬರು ಮತದಾನ ಮಾಡುವಂತೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ, ಬೂತ್ ಅಧ್ಯಕ್ಷ ರಾಕೇಶ್ ಸೋಂಕರ್ಗೆ ಕೆಲ ಪ್ರಶ್ನೆಗಳನ್ನು ಕೇಳಿದ ಪ್ರಧಾನಿಯವರು ಸದ್ಯ ವಾರಾಣಸಿಯಲ್ಲಿ ಜನರ ಅಭಿಪ್ರಾಯ ಹೇಗಿದೆ ಎಂದು ಕೇಳಿದರು. ಈ ಪ್ರಶ್ನೆಗೆ ಕಾಶಿಯಲ್ಲಿ 'ಹರ್ ಹರ್ ಮೋದಿ, ಗರ್ ಗರ್ ಮೋದಿ' ಎಂಬ ಘೋಷಣೆ ಮೊಳಗುತ್ತಿದೆ. ಈ ಬಾರಿಯೂ ದಾಖಲೆಯ ಅಂತರದ ಮತಗಳಿಂದ ಗೆಲ್ಲುವಿರಿ ಎಂಬ ವಿಶ್ವಾಸ ವ್ಯಕ್ತಪಡಿಸಿದರು.