ಗುವಾಹಟಿ :ಅಸ್ಸಾಂನಲ್ಲಿ 11,600 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು. ಗುವಾಹಟಿಯ ಖಾನಪಾರಾದ ಪಶುವೈದ್ಯಕೀಯ ಕಾಲೇಜು ಆಟದ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದ ಧನಸಹಾಯದಿಂದ ಅನುಷ್ಠಾನಗೊಳಿಸಲಾಗುತ್ತಿರುವ ಅನೇಕ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ಈ ಸಂದರ್ಭದಲ್ಲಿ ಚಾಲನೆ ನೀಡಿದರು.
498 ಕೋಟಿ ರೂ. ವೆಚ್ಚದ ಕಾಮಾಕ್ಯ ದೇವಾಲಯದ ಕಾರಿಡಾರ್, 358 ಕೋಟಿ ರೂ. ವೆಚ್ಚದ ಗುವಾಹಟಿಯ ಹೊಸ ವಿಮಾನ ನಿಲ್ದಾಣ ಟರ್ಮಿನಲ್ನಿಂದ ಆರು ಪಥದ ರಸ್ತೆ, ನೆಹರೂ ಕ್ರೀಡಾಂಗಣವನ್ನು ಫಿಫಾ ಮಾನದಂಡಗಳಿಗೆ ಮೇಲ್ದರ್ಜೆಗೇರಿಸುವ 831 ಕೋಟಿ ರೂ. ವೆಚ್ಚದ ಕಾಮಗಾರಿ ಮತ್ತು 300 ಕೋಟಿ ರೂ. ವೆಚ್ಚದಲ್ಲಿ ಚಂದ್ರಾಪುರದಲ್ಲಿ ಹೊಸ ಕ್ರೀಡಾ ಸಂಕೀರ್ಣ ನಿರ್ಮಾಣಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
'ಅಸ್ಸೋಂ ಮಾಲಾ' ರಸ್ತೆಗಳ ಎರಡನೇ ಆವೃತ್ತಿಗೂ ಪ್ರಧಾನಿ ಚಾಲನೆ ನೀಡಿದರು. 38 ಕಾಂಕ್ರೀಟ್ ಸೇತುವೆಗಳೊಂದಿಗೆ 43 ಹೊಸ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ನಿರ್ಮಿಸುವ ಒಟ್ಟು 3,444 ಕೋಟಿ ರೂ. ವೆಚ್ಚದ ಕಾಮಗಾರಿಗಳು ಇದರಲ್ಲಿವೆ. ಇದಲ್ಲದೆ 3,250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಮಗ್ರ ಹೊಸ ಕಟ್ಟಡಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.