ಭುವನೇಶ್ವರ್: ಪಿಎಂಎವೈ-ನಗರ ಯೋಜನೆಯ ಫಲಾನುಭವಿಗಳ ಗೃಹ ಪ್ರವೇಶ ಸಂಭ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿಯಾದರು. ಇಂದು ಒಡಿಶಾಗೆ ಭೇಟಿ ನೀಡಿರುವ ಅವರು ಭುವನೇಶ್ವರ್ನ ಗಡಕನದಲ್ಲಿನ ಸಬರ್ ಸಜಿ ಕೊಳೆಗೇರಿಗೆ ಭೇಟಿ ನೀಡಿ, ಫಲಾನುಭವಿಗಳೊಂದಿಗೆ 30 ನಿಮಿಷ ಸಮಯ ಕಳೆದರು. ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಂಜಿ ಜೊತೆಗಿದ್ದರು.
ಪ್ರಧಾನ ಮಂತ್ರಿ ಆವಾಸ್-ನಗರ ಯೋಜನೆಯ ಫಲಾನುಭವಿಗಳು ಪ್ರಧಾನಿ ಮೋದಿ ಹಣೆಗೆ ತಿಲಕ ಹಚ್ಚಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಆರತಿ ಬೆಳಗಿ, ಸಹಿ ತಿನ್ನಿಸಿದರು. ಇದೇ ವೇಳೆ ಮೋದಿ ಅವರ 74ನೇ ಜನ್ಮದಿನದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಖೀರ್ ಹಂಚಿ ಖುಷಿಪಟ್ಟರು.
ಸುಭದ್ರಾ ಯೋಜನೆಗೆ ಚಾಲನೆ: ಇದಾದ ಬಳಿಕ ನರೇಂದ್ರ ಮೋದಿ ಒಡಿಶಾ ಸರ್ಕಾರದ ಸುಭದ್ರಾ ಯೋಜನೆಗೆ ಚಾಲನೆ ನೀಡಿದರು. 21ರಿಂದ 60 ವರ್ಷದೊಳಗಿನ ಅರ್ಹ ಮಹಿಳಾ ಫಲಾನುಭವಿಗಳಿಗೆ ವರ್ಷಕ್ಕೆ 10,000 ರೂ. ನೀಡುವ ಯೋಜನೆ ಇದಾಗಿದೆ. ಪ್ರತಿ ವರ್ಷ ರಾಖಿ ಹುಣ್ಣಿಮೆ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನ (ಮಾರ್ಚ್ 8) ಫಲಾನುಭವಿಗಳ ಖಾತೆಗೆ 5 ಸಾವಿರ ರೂ.ಯಂತೆ ಎರಡು ಕಂತಿನಲ್ಲಿ 10 ಸಾವಿರ ರೂ.ವನ್ನು ಸರ್ಕಾರ ನೀಡಲಿದೆ.