ಆಂಧ್ರ ಪ್ರದೇಶ: ಆಂಧ್ರ ಪ್ರದೇಶದ ತಿರುಪತಿಯ ತಿರುಮಲ ಬೆಟ್ಟದಲ್ಲಿರುವ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬ ಆರೋಪ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು 11 ದಿನಗಳ ಪ್ರಾಯಶ್ಚಿತ್ತ ಉಪವಾಸ ವ್ರತ ಕೈಗೊಳ್ಳುವುದಾಗಿ ಇಂದು ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತಿಳಿಸಿರುವ ಅವರು, 'ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಿದ ಸಂಗತಿಯನ್ನು ಇದಕ್ಕೂ ಮುನ್ನವೇ ಪತ್ತೆ ಹಚ್ಚಲು ಸಾಧ್ಯವಾಗದೇ ಇರುವುದಕ್ಕೆ ನನಗೆ ಅಪರಾಧ ಪ್ರಜ್ಞೆ ಕಾಡುತ್ತಿದೆ. ಅತ್ಯಂತ ಪವಿತ್ರವೆಂದು ಭಾವಿಸಲಾಗುವ ಲಡ್ಡು ಪ್ರಸಾದವನ್ನು ಈ ಹಿಂದಿನ ಆಡಳಿತ ಅಪವಿತ್ರಗೊಳಿಸಿದೆ. ಇಂಥ ಪಾಪವನ್ನು ಸಾಕಷ್ಟು ಮುನ್ನವೇ ಕಂಡುಹಿಡಿಯಲು ಸಾಧ್ಯವಾಗದೇ ಇರುವುದರಿಂದ ಹಿಂದೂ ಕುಲಕ್ಕೆ ಕಳಂಕ ಬಂದಿದೆ. ಜನರ ಯೋಗಕ್ಷೇಮಕ್ಕೋಸ್ಕರ ಹೋರಾಟ ಮಾಡುತ್ತಿರುವ ನನಗೆ ಈ ಮೊದಲೇ ಇಂಥ ಘಟನೆಯನ್ನು ಪತ್ತೆ ಮಾಡಲು ಸಾಧ್ಯವಾಗದೇ ಇರುವುದು ಅತೀವ ನೋವು ತರಿಸಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸನಾತನ ಧರ್ಮವನ್ನು ನಂಬುವ ಪ್ರತಿಯೊಬ್ಬ ವ್ಯಕ್ತಿಯೂ ಕಲಿಯುಗದ ದೇವರಾದ ಬಾಲಾಜಿಗೆ ಮಾಡಿರುವ ಘೋರ ಅನ್ಯಾಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ. ಇದರ ಬಾಗವಾಗಿ ನಾನು ಪ್ರಾಯಶ್ಚಿತ್ತ ಪ್ರಾರಂಭಿಸಿದ್ದೇನೆ. ಸೆಪ್ಟಂಬರ್ 22ರಂದು ಬೆಳಿಗ್ಗೆ ಗುಂಟೂರು ಜಿಲ್ಲೆಯ ನಂಬೂರಿನ ಶ್ರೀ ದಶಾವತಾರ ದೇಗುಲದಲ್ಲಿ ವ್ರತ ಕೈಗೊಳ್ಳುತ್ತೇನೆ. ಹನ್ನೊಂದು ದಿನಗಳ ನಂತರ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.