ನವದೆಹಲಿ: ನೀಟ್-ಯುಜಿ ಮರು ಪರೀಕ್ಷಾ ಫಲಿತಾಂಶದ ಪರಿಷ್ಕೃತ ಪಟ್ಟಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಇಂದು ಪ್ರಕಟಿಸಿತು. ಹೊಸ ರ‍್ಯಾಂಕ್ ವಿವರ ಬಿಡುಗಡೆ ಮಾಡಲಾಗಿದೆ.
ಮೇ 5ರಂದು ಆರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ವಿಳಂಬದಿಂದಾಗಿ ಗ್ರೇಸ್ ಅಂಕ ಪಡೆದ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಏಳು ಕೇಂದ್ರದಲ್ಲಿ ಜೂನ್ 13ರಂದು 1,563 ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಆದರೆ, ಕೇವಲ 813 ಅಭ್ಯರ್ಥಿಗಳು ಹಾಜರಾಗಿದ್ದರು. ಉಳಿದವರು ಗ್ರೇಸ್ ಅಂಕದ ಹೊರತಾದ ಮಾರ್ಕ್ಸ್ ಆಯ್ಕೆ ಮಾಡಿದ್ದಾರೆ ಎಂದು ಎನ್‌ಟಿಎ ತಿಳಿಸಿದೆ.
ಕಠಿಣ ಪರೀಕ್ಷೆಗಳ ಪೈಕಿ ಒಂದಾಗಿರುವ ನೀಟ್ನಲ್ಲಿ ಈ ಬಾರಿ ಗ್ರೇಸ್ ಮಾರ್ಕ್ಸ್ ಮತ್ತು ಪತ್ರಿಕೆ ಸೋರಿಕೆ ಘಟನೆಗಳಿಂದ ದೇಶಾದ್ಯಂತ ವಿವಾದವೆದ್ದಿತ್ತು. ಹರಿಯಾಣದ ಒಂದೇ ಕೇಂದ್ರದಲ್ಲಿ ಆರು ವಿದ್ಯಾರ್ಥಿಗಳು 720 ಅಂಕ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರೇಸ್ ಅಂಕಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಗ್ರೇಸ್ ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ನೀಡಿತ್ತು.
ಮರು ಪರೀಕ್ಷೆ ನಡೆದ ಏಳು ಕೇಂದ್ರದಲ್ಲಿ ಚಂಢೀಗಢದಲ್ಲಿ ಅಭ್ಯರ್ಥಿಗಳು ಗೈರಾಗಿದ್ದು, ಛತ್ತೀಸ್‌ಗಢದಿಂದ 291, ಗುಜರಾತ್‌ನಲ್ಲಿ ಓರ್ವ, ಹರಿಯಾಣದಿಂದ 287 ಮತ್ತು ಮೇಘಾಲಯದಿಂದ 234 ಅಭ್ಯರ್ಥಿಗಳು ಮರು ಪರೀಕ್ಷೆ ಎದುರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.