ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ಸ್ಥಾನಮಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಶುಕ್ರವಾರ ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ನೀಡಿದೆ. ಮೂರು ಭಿನ್ನಾಭಿಪ್ರಾಯದ ತೀರ್ಪುಗಳು ಸೇರಿದಂತೆ ನಾಲ್ಕು ಪ್ರತ್ಯೇಕ ಅಭಿಪ್ರಾಯದ ತೀರ್ಪುಗಳು ಬಂದಿವೆ ಎಂದು ನ್ಯಾಯಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಜೆಬಿ ಪರ್ಡಿವಾಲಾ, ಮನೋಜ್ ಮಿಶ್ರಾ ಮತ್ತು ಸ್ವತಃ ತಮ್ಮ ಪರವಾಗಿ ಬಹುಮತದ ತೀರ್ಪನ್ನು ತಾವು ಬರೆದಿರುವುದಾಗಿ ಸಿಜೆಐ ಹೇಳಿದರು. ಈ ಬಹುಮತದ ತೀರ್ಪಿಗೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಸ್. ಅಜೀಜ್ ಬಾಷಾ ವಿರುದ್ಧ ಭಾರತ ಸರ್ಕಾರದ ಪ್ರಕರಣದಲ್ಲಿ 1967 ರ ತೀರ್ಪನ್ನು ಬಹುಮತದ ತೀರ್ಪು ತಳ್ಳಿಹಾಕಿದೆ ಎಂದು ಸಿಜೆಐ ಹೇಳಿದರು. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವು ಅಲ್ಪಸಂಖ್ಯಾತ ಸಂಸ್ಥೆಯಲ್ಲ ಎಂದು ಐದು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠವು ತೀರ್ಪು ನೀಡಿದೆ. ಆದಾಗ್ಯೂ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಹೌದಾ ಅಥವಾ ಅಲ್ಲವಾ ಎಂಬ ಪ್ರಶ್ನೆಯ ಮೇಲೆ ಸುಪ್ರೀಂ ಕೋರ್ಟ್ ಯಾವುದೇ ಉತ್ತರ ನೀಡಿಲ್ಲ.
ಮತ್ತೊಂದು ನ್ಯಾಯಪೀಠ ರಚನೆ ಮಾಡಲಾಗುವುದು ಎಂದು ಹೇಳಿದ ಸುಪ್ರೀಂ:ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ಸ್ಥಾನಮಾನವನ್ನು ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ನ 2006 ರ ಆದೇಶದ ಸಿಂಧುತ್ವ ನಿರ್ಧರಿಸಲು ಮತ್ತೊಂದು ನ್ಯಾಯಪೀಠ ರಚಿಸಲಾಗುವುದು ಎಂದು ಅದು ಹೇಳಿದೆ. ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಸಂವಿಧಾನದ 30 ನೇ ವಿಧಿಯ ಅಡಿ ಎಎಂಯು ಅನ್ನು ಅಲ್ಪಸಂಖ್ಯಾತ ಸಂಸ್ಥೆ ಎಂದು ಪರಿಗಣಿಸಬಹುದೇ ಎಂಬ ಬಗ್ಗೆ ತೀರ್ಪನ್ನು ಕಾಯ್ದಿರಿಸಿತ್ತು.
ಬಹುಮತದ ತೀರ್ಪನ್ನು ಓದಿದ ಸಿಜೆಐ, ಎಎಂಯುಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನಿರಾಕರಿಸಲು ಆಧಾರವಾದ ಅಜೀಜ್ ಬಾಷಾ ಪ್ರಕರಣದಲ್ಲಿನ ತೀರ್ಪನ್ನು ತಳ್ಳಿಹಾಕಲಾಗಿದೆ ಎಂದು ಹೇಳಿದರು. ಆದಾಗ್ಯೂ, ಈ ತೀರ್ಪಿನಲ್ಲಿ ವಿಕಸನಗೊಂಡ ತತ್ವಗಳ ಆಧಾರದ ಮೇಲೆ ಎಎಂಯುನ ಅಲ್ಪಸಂಖ್ಯಾತ ಸ್ಥಾನಮಾನವನ್ನು ಹೊಸದಾಗಿ ನಿರ್ಧರಿಸುವ ಅಧಿಕಾರವನ್ನು ಸಿಜೆಐ ಮೂವರು ನ್ಯಾಯಾಧೀಶರ ಪೀಠಕ್ಕೆ ಬಿಟ್ಟರು.