ಕರ್ನಾಟಕ

karnataka

ETV Bharat / bharat

ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯ ನೇತೃತ್ವದಲ್ಲಿ ನೀಟ್​ ಅಕ್ರಮ ತನಿಖೆಯಾಗಲಿ: ರಶೀದ್ ಅಲ್ವಿ - NEET paper leak - NEET PAPER LEAK

ಸುಪ್ರೀಂ ಕೋರ್ಟ್​ ನ್ಯಾಯಾಧೀಶರ ನೇತೃತ್ವದಲ್ಲಿ ನೀಟ್ ಪರೀಕ್ಷಾ ಅಕ್ರಮದ ತನಿಖೆ ನಡೆಯಲಿ ಎಂದು ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ
ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ (IANS)

By ETV Bharat Karnataka Team

Published : Jun 23, 2024, 8:04 PM IST

ನವದೆಹಲಿ: 2024ರ ನೀಟ್-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಿಸಬೇಕು ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ರವಿವಾರ ಆಗ್ರಹಿಸಿದ್ದಾರೆ.

ಐಎಎನ್ಎಸ್ ಜೊತೆ ಮಾತನಾಡಿದ ಅಲ್ವಿ, "ಈ ಪ್ರಕರಣದ (ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ) ತನಿಖೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನೇಮಿಸಬೇಕು. ಆರು ಸದಸ್ಯರ ಸಮಿತಿಯಲ್ಲಿರುವವರೆಲ್ಲರೂ ಬಿಜೆಪಿಯವರಾಗಿರುವುದರಿಂದ ಅವರಿಂದ ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಸಿಬಿಐ ಬಿಜೆಪಿಯ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಅದೂ ಕೂಡ ಸರಿಯಾದ ತನಿಖೆ ಮಾಡಲು ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳಿದರು.

"ಅವರು ಎನ್​ಟಿಎಯ ಡಿಜಿಯನ್ನು ಬದಲಾಯಿಸಿದ್ದಾರೆ. ಅಕ್ರಮಕ್ಕೆ ಅವರು ಜವಾಬ್ದಾರಿಯಾಗಿದ್ದರೆ ಅವರನ್ನು ಬಂಧಿಸಿ. ಇತರರನ್ನು ಬಲಿಪಶುಗಳನ್ನಾಗಿ ಮಾಡಬೇಡಿ. ಯಾವುದೇ ಹಗರಣ ನಡೆದಿಲ್ಲ ಎಂದು ಶಿಕ್ಷಣ ಸಚಿವರು ಈ ಹಿಂದೆ ಹೇಳುತ್ತಿದ್ದರು, ಆದರೆ ಈಗ ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ಹೀಗಾಗಿ ಅವರು ಮಂತ್ರಿಯಾಗಿ ಮುಂದುವರೆಯುವ ಹಕ್ಕನ್ನೇ ಕಳೆದುಕೊಂಡಿದ್ದಾರೆ. ಒಂದೋ ಅವರು ರಾಜೀನಾಮೆ ನೀಡಬೇಕು ಅಥವಾ ಪ್ರಧಾನಿ ಅವರನ್ನು ಹೊರಹಾಕಬೇಕು. ಇದು ಲಕ್ಷಾಂತರ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಉತ್ತರ ಪ್ರದೇಶದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು" ಎಂದು ಕಾಂಗ್ರೆಸ್ ನಾಯಕ ರಶೀದ್​ ನುಡಿದರು.

ಲೈಂಗಿಕ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸಹೋದರನ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಇದು ಕಾನೂನು ವಿಷಯವಾಗಿದ್ದು, ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಆ ಜನ ಎಂಥ ಆರೋಪಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ ಎಂಬುದು ಇಡೀ ದೇಶಕ್ಕೆ ಚೆನ್ನಾಗಿ ತಿಳಿದಿದೆ. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಕಾನೂನು ತನ್ನ ಕೆಲಸ ಮಾಡಲಿದೆ." ಎಂದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರಲು ಬಿಜೆಪಿ ಬಯಸಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅಲ್ವಿ, "ಅವರು (ಬಿಜೆಪಿ) ಹಲವಾರು ರಾಜ್ಯಗಳಲ್ಲಿ ಸರ್ಕಾರವನ್ನು ಹೊಂದಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಜಿಎಸ್​ಟಿ ವಿಧಿಸಬೇಕೆಂದು ಪ್ರತಿಪಕ್ಷಗಳು ಬಯಸುತ್ತವೆ. ಜಿಎಸ್​ಟಿ ಜಾರಿಯಾದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅರ್ಧದಷ್ಟು ಕಡಿಮೆಯಾಗುತ್ತದೆ. ಆದರೆ ಪ್ರಶ್ನೆಯೆಂದರೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಸರ್ಕಾರಗಳು ಏನು ಬಯಸುತ್ತಿವೆ? ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ಎಸ್ಎಸ್ ಒಪ್ಪಿಗೆಯಿಲ್ಲದೆ ಆ ಸರ್ಕಾರಗಳು ಯಾವುದೇ ನಿರ್ಧಾರ ತೆಗೆದುಕೊಳ್ಳಲಾರವು. ಏನೇ ಆದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರಬೇಕೆಂದು ಪ್ರತಿಪಕ್ಷಗಳು ಬಯಸುತ್ತವೆ. ಇದರಿಂದ ಬಹಳಷ್ಟು ಜನರಿಗೆ ಪರಿಹಾರ ಸಿಗುತ್ತದೆ" ಎಂದು ಅವರು ಹೇಳಿದರು.

ಇದನ್ನೂ ಓದಿ : 2027ರ ಯುಪಿ ಚುನಾವಣೆ: ಯಾದವೇತರ ಒಬಿಸಿ ಮತಗಳ ಕ್ರೋಢೀಕರಣಕ್ಕೆ ಅಖಿಲೇಶ್ ಕಾರ್ಯತಂತ್ರ - Akhilesh Yadav Poll Strategy

ABOUT THE AUTHOR

...view details