ನವದೆಹಲಿ:ಕರ್ನಾಟಕ ಸರ್ಕಾರದ ಕಳಸಾ ಬಂಡೂರಿ ನಾಲಾ ನೀರಿನ ತಿರುವು ಯೋಜನೆಯ ಒಂದು ಭಾಗದ ನಿರ್ಮಾಣಕ್ಕಾಗಿ ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಅರಣ್ಯ ಭೂಮಿಯನ್ನು ಬಳಕೆ ಮಾಡುವ ಕುರಿತು ನಿರ್ಧಾರವನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ಮುಂದೂಡಿದೆ.
ಎನ್‌ಬಿಡಬ್ಲ್ಯುಎಲ್‌ನ ಸ್ಥಾಯಿ ಸಮಿತಿಯಿಂದ ಜನವರಿ 30 ರಂದು ನಡೆದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ. ಸಭೆಯ ನಡಾವಳಿಗಳ ಪ್ರಕಾರ, ರಾಜ್ಯ ಸರ್ಕಾರವು ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶಗಳ ನಡುವಿನ ಹುಲಿ ಕಾರಿಡಾರ್‌ನಿಂದ 10.68 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ. ಡೈವರ್ಶನ್ ವೇರ್, ಜಾಕ್ ವೆಲ್ ಕಮ್-ಪಂಪ್ ಹೌಸ್ ಮತ್ತು ಸಬ್ ಸ್ಟೇಷನ್ ನಿರ್ಮಾಣಕ್ಕಾಗಿ ಅರಣ್ಯ ಭೂಮಿ ಅಗತ್ಯತೆ ಇದೆ ಎಂದು ಕೋರಲಾಗಿದೆೆ. ಹಾಗೆಯೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ ಪೈಪ್‌ಲೈನ್ ಮತ್ತು ವಿದ್ಯುತ್ ಲೈನ್ ಅವಳಡಿಸುವ ಅಗತ್ಯವಿದ್ದು ಅನುಮೋದನೆ ನೀಡುವಂತೆ ಕರ್ನಾಟಕದ ಮುಖ್ಯ ವನ್ಯಜೀವಿ ವಾರ್ಡನ್, ರಾಜ್ಯ ವನ್ಯಜೀವಿ ಮಂಡಳಿ ಮತ್ತು ರಾಜ್ಯ ಸರ್ಕಾರವು ಮಂಡಳಿ ಮುಂದೆ ಈ ಪ್ರಸ್ತಾವನೆಯನ್ನು ಇರಿಸಿದೆ. ಈ ಸಂಬಂಧ ಶಿಫಾರಸು ಕೂಡಾ ಮಾಡಲಾಗಿದೆ ಎಂದು ಸ್ಥಾಯಿ ಸಮಿತಿಗೆ ತಿಳಿಸಲಾಯಿತು.