ಮುಂಬೈ, ಮಹಾರಾಷ್ಟ್ರ: ನನ್ನ ತಂದೆ ಸಿಂಹದಂತಹ ವ್ಯಕ್ತಿತ್ವವುಳ್ಳವರು. ಅವರ ಹತ್ಯೆ ಮಾಡಿದ ಬಳಿಕ ಹಂತಕರು ನನ್ನನ್ನು ಗುರಿಯಾಗಿಸಿರಬಹುದು. ಆದರೆ, ನನ್ನ ರಕ್ತದಲ್ಲಿರುವುದು ನನ್ನ ತಂದೆಯ ಸಿಂಹದಂತಹ ವ್ಯಕ್ತಿತ್ವ. ಅವರ ರೀತಿಯಲ್ಲಿಯೇ ನಾನು ಘರ್ಜನೆ ಮುಂದುವರೆಸುತ್ತೇನೆ ಎಂದು ಹತ್ಯೆಗೀಡಾದ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಮಗ ಜೀಶನ್ ಸಿದ್ಧಿಕಿ ತಿಳಿಸಿದ್ದಾರೆ.
ನವರಾತ್ರಿ ಪೂಜೆ ಸಮಯದಲ್ಲಿ ಅಕ್ಟೋಬರ್ 12 ರಂದು ಬಾಂದ್ರಾ ಪ್ರದೇಶದ ಜೀಶನ್ ಸಿದ್ದಿಕಿ ಅವರ ಕಚೇರಿ ಬಳಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಮೂವರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಈ ಕುರಿತು ಮಾತನಾಡಿರುವ ಮಗ ಜೀಶನ್ ಸಿದ್ಧಿಕಿ, ನನ್ನ ತಂದೆಯನ್ನು ಅವರು ಮೌನಗೊಳಿಸಿರಬಹುದು. ಆದರೆ, ನನ್ನ ತಂದೆಯ ಘರ್ಜನೆಯನ್ನು ನಾನು ಹೊಂದಿರುವುದನ್ನು ಅವರು ಮರೆತಿದ್ದಾರೆ. ಅವರ ಹೋರಾಟ ನನ್ನ ನರ ನಾಡಿಗಳಲ್ಲಿ ಹರಿಯುತ್ತಿದೆ. ಅವರು ನ್ಯಾಯಾಕ್ಕಾಗಿ ಬದಲಾವಣೆಗಾಗಿ ಧೈರ್ಯದಿಂದ ಹೋರಾಡಿದವರು. ಎಂದು ಬಾಂದ್ರಾ ಪೂರ್ವ ಶಾಸಕ ಭಾನುವಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ನನ್ನ ತಂದೆ ಹತ್ಯೆ ಮಾಡಿ ಅವರು ಗೆದ್ದಿರುವುದಾಗಿ ಭಾವಿಸಿದ್ದಾರೆ. ಅಲ್ಲದೇ ಅವರ ಗಮನವನ್ನು ನನ್ನತ್ತ ನೆಟ್ಟಿರಬಹುದು. ಆದರೆ, ನನ್ನ ರಕ್ತದಲ್ಲಿ ಹರಿಯುತ್ತಿರುವ ಸಿಂಹದಂತಹ ತಂದೆಯ ಗುಣಹೊಂದಿರುವ ರಕ್ತ. ನಾನು ಭಯಪಡದೇ, ಕಂಗಲಾಗದೇ ಇದ್ದೇನೆ. ಅವರು ಒಬ್ಬರನ್ನು ಕರೆದೊಯ್ದಿರಬಹುದು. ನಾನು ಅವರ ಸ್ಥಾನದಲ್ಲಿದ್ದು ಹೋರಾಡುತ್ತೇನೆ. ಬಾಂದ್ರಾದ ಪೂರ್ವದ ಜನರ ಜೊತೆಯಾಗಿದ್ದೇನೆ ಎಂದರು.
ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ತನಿಖೆಗೆ ನಡೆಸುತ್ತಿರುವ ಪೊಲೀಸರು ಇದುವರೆಗೆ 10 ಜನರನ್ನು ಬಂಧಿಸಿದ್ದು, ಪ್ರಮುಖ ಶೂಟರ್ ಮತ್ತು ಇಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.
ಹತ್ಯೆ ಹಿಂದಿನ ಉದ್ದೇಶ ಇನ್ನೂ ಬಹಿರಂಗವಾಗಿಲ್ಲ. ಆದರೆ, ಹತ್ಯೆ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಬಾ ಸಿದ್ದಿಕಿ ಜೊತೆಗೆ ಜೀಶನ್ ಸಿದ್ದಿಕಿಯನ್ನು ಕೊಲ್ಲಲು ತಂಡ ನಿರ್ಧರಿಸಿತ್ತು. ಸಿದ್ಧಿಕಿ ಹತ್ಯೆ ದಿನದಂದು ಇಬ್ಬರನ್ನು ಅಥವಾ ಯಾರು ಸಿಗುತ್ತಾರೋ ಅವರನ್ನು ಕೊಲ್ಲುವಂತೆ ಆರೋಪಿಗಳಿಗೆ ಗ್ಯಾಂಗ್ ಸೂಚನೆ ನೀಡಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬಿಷ್ಣೋಯ್ ಹಿಟ್ಲಿಸ್ಟ್ನಲ್ಲಿ ಬಾಬಾ ಸಿದ್ದಿಕಿ ಪುತ್ರ: ಯಾರೇ ಸಿಕ್ಕರೂ ಹತ್ಯೆ ಮಾಡಲು ಬಂದಿತ್ತು ಆದೇಶ!