ಅಪುಲಿಯಾ (ಇಟಲಿ): ಜಿ-7 ಶೃಂಗಸಭೆ ಸಲುವಾಗಿ ಪಿಎಂ ಮೋದಿ ಇಟಲಿ ಪ್ರವಾಸ ಕೈಗೊಂಡಿದ್ದಾರೆ. ಶುಕ್ರವಾರದಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಿದರು. ಅಲ್ಲದೇ, ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಸಭೆ ಕೂಡ ನಡೆಸಿದರು. ಮುಂಬೈ - ಅಹಮದಾಬಾದ್ ಹೈಸ್ಪೀಡ್ ರೈಲ್ವೆ ಯೋಜನೆ ಬಗ್ಗೆ ಚರ್ಚಿಸಿದರು. ಜಪಾನ್ನಿಂದ ಭಾರತದಲ್ಲಿ 5 ಟ್ರಿಲಿಯನ್ ಯೆನ್ ಹೂಡಿಕೆ ಬಗ್ಗೆ ಮಾತುಕತೆ ನಡೆಲಾಯಿತು.
ಭಾರತ ಮತ್ತು ಜಪಾನ್ ಸಂಬಂಧವನ್ನು ಎತ್ತಿ ಹಿಡಿದ ಪ್ರಧಾನಮಂತ್ರಿ ಕಚೇರಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ, "ಭಾರತ-ಜಪಾನ್ ಸಂಬಂಧಗಳನ್ನು ಉತ್ತೇಜಿಸುತ್ತಾ, ಪಿಎಂ ಮೋದಿ ಅವರು ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ ಅವರೊಂದಿಗೆ ಇಟಲಿಯಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು" ಎಂದು ಬರೆದುಕೊಂಡಿದೆ. ಅವರು, ವ್ಯವಹಾರಗಳು, ಜನರಿಂದ ಜನರು, ಸರ್ಕಾರದಿಂದ ಸರ್ಕಾರದ ಸಂಬಂಧಗಳನ್ನು ಬಲಪಡಿಸುವುದು ಮತ್ತು ವ್ಯಾಪಾರ ಅವಕಾಶಗಳನ್ನು ಉತ್ತೇಜಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.
"ಪ್ರಧಾನಿಗಳ ಈ ಚರ್ಚೆಯು, ಬಿ2ಬಿ, ಪಿ2ಪಿ ಮತ್ತು ಜಿ2ಜಿ ಸಂಬಂಧಗಳು ಮತ್ತು ವ್ಯಾಪಾರದ ಮಾರ್ಗಗಳನ್ನು ಬಲಪಡಿಸುವುದರ ಜೊತೆಗೆ ರಕ್ಷಣೆ ಮತ್ತು ಹೈಸ್ಪೀಡ್ ರೈಲು ಮೂಲ ಸೌಕರ್ಯಗಳಂತಹ ಪ್ರಮುಖ ವಿಷಯಗಳಿಗೆ ಉತ್ತೇಜನ ನೀಡುವುದು ಸೇರಿ ಕೆಲ ವಿಚಾರಗಳನ್ನು ಒಳಗೊಂಡಿತ್ತು" ಎಂದು ಪಿಎಂಒ ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.